ಪ್ಲಾಸ್ಟಿಕ್ ಬಳಕೆಯಿಂದ ವಿನಾಶದತ್ತ ಭೂಮಿ plastic
ಮುಳಬಾಗಿಲು: ಆಧುನಿಕತೆಯ ಹೆಸರಲ್ಲಿ ಕಾರ್ಖಾನೆಗಳು ಬಿಡುವ ನಾನಾ ವಿಧದ ತ್ಯಾಜ್ಯ, ನಾಶವಾಗದ ಪ್ಲಾಸ್ಟಿಕ್ನಿಂದ ಭೂಮಿ ವಿಷಕಾರಿಯಾಗುತ್ತಿದೆ. ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಔಷಧ ಸಿಂಪಡಣೆಯಿಂದ ಭೂಮಿ ಸಂಪೂರ್ಣ ನಾಶದತ್ತ ಸಾಗುತ್ತಿದೆ ಎಂದು ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಗದೀಶ್ ಗೌಡ ರುದ್ರೆ ಆತಂಕ ವ್ಯಕ್ತಪಡಿಸಿದರು.plastic
ತಾಲೂಕಿನ ಕೆಜಿಎಫ್ ರಸ್ತೆಯ ಕುಮದೇನಹಳ್ಳಿ ಅರಣ್ಯ ಪ್ರದೇಶದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭೂಮಿ ದಿನಾಚರಣೆಯಲ್ಲಿ ಮಾತನಾಡಿ, ಇತ್ತೀಚೆಗೆ ಭೂಮಿಗೆ ರಾಸಾಯನಿಕ ಗೊಬ್ಬರ, ಔಷಧ ಹಾಗೂ ಪ್ಲಾಸ್ಟಿಕ್ ಮಿಶ್ರಣವಾಗುತ್ತಿರುವುದರಿಂದ ಭೂಮಿ ವಿಷಕಾರಿಯಾಗಿ ಬದಲಾಗುತ್ತಿದೆ. ಎಲ್ಲರೂ ಭೂಮಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರಿ ವಕೀಲ ನಂಗಲಿ ಆರ್.ನಾಗರಾಜ್ ಮಾತನಾಡಿ, ಯುವಕರು ಮೊಬೈಲ್ಗಳಲ್ಲಿ ಕಾಲ ಕಳೆಯುತ್ತಾ ಸಮಾಜ ನಿರ್ಮಾಣ ಕಾರ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ಯುವಕರು ಭೂಮಿ ಶುದ್ಧತೆ, ಪರಿಸರ ನಿರ್ಮಾಣ ಹಾಗೂ ಭೂಮಿಗೆ ವಿಷಕಾರಿ ವಸ್ತುಗಳನ್ನು ಹಾಕದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಜಾಗತೀಕರಣದ ಹೆಸರಿನಲ್ಲಿ ಪರಿಸರ ಹಾಗೂ ಮರಗಳ ಮಾರಣ ಹೋಮ ನಡೆಯುತ್ತಿದೆ. ಎಲ್ಲರೂ ಸಸಿ ನೆಡುವ ಮೂಲಕ ಪರಿಸರವನ್ನು ಮರುಸೃಷ್ಟಿ ಮಾಡಬೇಕು ಎಂದು ಹೇಳಿದರು.