ನಿಂಬಾಳ-ನಿಂಬರ್ಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೆಸರುಮಯವಾಗಿರುವುದು.
- ಮಾಡಿಯಾಳದಲ್ಲಿ ಮೂಲಸೌಕರ್ಯ ಮರೀಚಿಕೆ
- ಮುಖ್ಯರಸ್ತೆ ಸಂಪೂರ್ಣ ಕೆಸರುಮಯ
ನಿಂಬರ್ಗಾ: ಬೀದಿ ದೀಪ ಉರಿಯುವುದಿಲ್ಲ, ಸರಿಯಾಗಿ ಕಸ ವಿಲೇವಾರಿ ಮಾಡಲ್ಲ, ತುಂಬಿ ಮುಖ್ಯ ರಸ್ತೆಗೆ ಹರಿಯುವ ಚರಂಡಿ ನೀರು.. ಕೊಳಚೆ ನೀರಿನಲ್ಲೇ ಮೂಗು ಮುಚ್ಚಿಕೊಂಡು ತಿರುಗಾಡುವ ಜನ.. ಇದು ಮಾಡಿಯಾಳ ಗ್ರಾಮದ ಅವ್ಯವಸ್ಥೆ.
ಮಾಡಿಯಾಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಸುಮಾರು 17 ಸದಸ್ಯರನ್ನು ಹೊಂದಿದೆ. 12000ಕ್ಕೂ ಅಧಿಕ ಜನರು ವಾಸಿಸುವ ದೊಡ್ಡ ಗ್ರಾಮ ಇದಾಗಿದೆ. ಆದರೆ ಮೂಲಸೌಕರ್ಯ ಮಾತ್ರ ಮರೀಚಿಕೆೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷದಿಂದಾಗಿ ಗ್ರಾಮವೂ ಹಾಳು ಹಳ್ಳಿಯಾಗಿ ಮಾರ್ಪಾಡಾಗಿದೆ.
ಚರಂಡಿ ವ್ಯವಸ್ಥೆ ಇದ್ದರೂ ಸ್ವಚ್ಛಗೊಳಿಸದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಳೆದ ಮೂರು ತಿಂಗಳಿಂದ ಕೊಳಚೆ ನೀರು ಮುಖ್ಯರಸ್ತೆ ಮೇಲೆ ಬರುತ್ತಿದ್ದು, ಇದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಕೆಸರು ರಸ್ತೆಯಲ್ಲಿ ಸಾಗುವಾಗ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳಿವೆ. ಇನ್ನು ಗಬ್ಬು ವಾಸನೆ ಬರುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಮದ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಬೀದಿದೀಪಗಳು ಕೆಟ್ಟು ಹೋಗಿ ಸುಮಾರು 3-4 ತಿಂಗಳುಗಳಾಗಿದ್ದು, ದುರಸ್ತಿ ಮಾಡುವವರು ಇಲ್ಲದಂತಾಗಿದೆ. ರಾತ್ರಿ ವೇಳೆ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ತಿರುಗಾಡಲು ಭಯ ಪಡುವಂತಾಗಿದೆ. ಶ್ರಾವಣ ಮಾಸ ಆರಂಭವಾಗಲಿದ್ದು, ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ದೇಗುಲಗಳಿಗೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ರಾತ್ರಿಯಿಡೀ ದೇಗುಲಗಳಲ್ಲಿ ಭಜನೆ, ಕೀರ್ತನೆ ನಡೆಯುತ್ತದೆ. ಜನರ ಸಂಚಾರ ನಿರಂತರವಾಗಿ ನಡೆಯಲಿದೆ. ಹೀಗಾಗಿ ಕೂಡಲೇ ದೀಪಗಳನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಬರುವುದಿಲ್ಲ. ಹೀಗಿದ್ದಾಗ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ? ಈಗಲಾದರೂ ಸಂಬಂಧಪಟ್ಟವರು ಗ್ರಾಮದತ್ತ ಗಮನಹರಿಸಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಜನರ ಒಕ್ಕೊರಲ ಒತ್ತಾಯವಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳು ಆಡಿದ್ದೆ ಆಟ ಎಂಬಂತಾಗಿದೆ. ಕಳೆದ 5-6 ತಿಂಗಳಿಂದ ಸಮರ್ಪಕವಾಗಿ ಕಸವಿಲೇವಾರಿ ಆಗುತ್ತಿಲ್ಲ. ಇದರಿಂದಾಗಿ ರಸ್ತೆ ಬದಿ ಹಾಗೂ ವಿವಿಧೆಡೆ ಕಸ ಸಂಗ್ರಹವಾಗಿದೆ. ಸೊಳ್ಳೆ ಕಾಟ ಹೆಚ್ಚಾಗಿ, ಸಾಂಕ್ರಾಮಿಕ ಕಾಯಿಲೆ ಭೀತಿ ಎದುರಾಗಿದೆ. ಕಸ ವಿಲೇವಾರಿ ಸಿಬ್ಬಂದಿಯನ್ನು ಕೇಳಿದರೆ ವಾಹನ ಕೆಟ್ಟು ಹೋಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕಸವಿಲೇವಾರಿಗೆ ಮುಂದಾಗಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.
ಮಾಡಿಯಾಳದಲ್ಲಿ ಚರಂಡಿ ಸ್ವಚ್ಛಗೊಳಿಸಲು ಜಿಪಂ ಮತ್ತು ತಾಪಂಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾರೊಬ್ಬರೂ ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ಹೀಗೆ ವರ್ತಿಸಿದರೆ ಗ್ರಾಪಂ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ.
— > ಬೀಮಾಶಂಕರ ಮಾಡಿಯಾಳ, ಜಿಲ್ಲಾಧ್ಯಕ್ಷ, ಕಿಸಾನ್ ಸಭಾ
ಮಾಡಿಯಾಳ ಗ್ರಾಮ ಪಂಚಾಯಿತಿ ಪಿಡಿಒ ಶಿವಾನಂದ ಮಾನಿಂಗ್ ಅವರು ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸುಧಾರಿಸಿದ ಬಳಿಕ ಅವರೊಂದಿಗೆ ಮಾತನಾಡಿ ಗ್ರಾಮದ ಸಮಸ್ಯೆಗೆ ಪರಿಹಾರ ಕಲ್ಪಿಸಲು ತಿಳಿಸುವೆ.
— > ಮಾನಪ್ಪ ಕಟ್ಟಿಮನಿ, ಇಒ, ತಾಪಂ