High court 
ರಾಜ್ಯ

ತಾಂತ್ರಿಕ ಕಾರಣಕ್ಕೆ ನ್ಯಾಯದ ಬಾಗಿಲು ಮುಚ್ಚಬಾರದು| High court

ಪ್ರಮುಖ ಮುಖ್ಯಾಂಶಗಳು

  • ಖರ್ಗೆ ಕುಟುಂಬದ ಟ್ರಸ್ಟ್​ ವಿರುದ್ಧದ ಖಾಸಗಿ ದೂರು ಮರುಪರಿಶೀಲನೆ
  • ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್​ ನಿರ್ದೇಶನ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಬಿಡಿಎಯಿಂದ ನಿಯಮಬಾಹಿರವಾಗಿ ಸಿಎ ನಿವೇಶನ ಮಂಜೂರಾಗಿದೆ ಎಂದು ಸಲ್ಲಿಕೆಯಾಗಿರುವ ಖಾಸಗಿ ದೂರನ್ನು ಪರಿಗಣಿಸಿ ಲೋಕಾಯುಕ್ತ ತನಿಖೆಗೆ ವಹಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್​ ಆದೇಶಿಸಿದೆ. 
ಲಂಚ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿಯನ್ನು ಭಾಗಶ@ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಖಾಸಗಿ ದೂರಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸದೆ ತಾನೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. 
ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ದೋಷಗಳಿವೆ ಎಂಬ ಕಾರಣಕ್ಕೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲು ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಬದಲಾಗಿ ಸ್ವತಃ ವಿಚಾರಣೆ ನಡೆಸುವುದಾಗಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ಪ್ರಮಾಣಪತ್ರದಲ್ಲಿರುವ ದೋಷಗಳನ್ನು ಸರಿಪಡಿಸಲು ಅರ್ಜಿದಾರರಿಗೆ ಅವಕಾಶ ನೀಡಬೇಕು. ಆನಂತರ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಅರ್ಜಿಯ ಮೆರಿಟ್​ ಆಧಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. 
ತನಿಖೆ ಏಕೆ ಅಗತ್ಯ?:
ದೂರಿನ ಆರೋಪಗಳು ಸಾರ್ವಜನಿಕ ಅಧಿಕಾರದ ದುರುಪಯೋಗ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ಆಸ್ತಿಯಿಂದ ಅಕ್ರಮವಾಗಿ ಲಾಭ ಪಡೆದ ವಿಷಯಕ್ಕೆ ಸಂಬಂಧಿಸಿರುವುದರಿಂದ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ತನಿಖಾ ಪ್ರಕ್ರಿಯೆ ಮಹತ್ವದ್ದಾಗಿದೆ. ಸರ್ಕಾರದ ಕಡತಗಳು, ಟಿಪ್ಪಣಿಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸದೆ ಇಂತಹ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಸಾಧ್ಯವಿಲ್ಲ. ಖಾಸಗಿ ದೂರುದಾರರಿಂದ ಎಲ್ಲ ದಾಖಲೆಗಳನ್ನು ನಿರೀಸಲು ಸಾಧ್ಯವಿಲ್ಲ. ಆದ್ದರಿಂದ ತಾಂತ್ರಿಕ ದೋಷಗಳ ಕಾರಣ ತನಿಖೆಯ ಬಾಗಿಲನ್ನೇ ಮುಚ್ಚಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
⚠️

ಪ್ರಮುಖ ಆರೋಪಗಳೇನು? 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯರಾಘವ ಮರಾಠೆ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಎಸ್​ಸಿ/ಎಸ್​ಟಿ ಸಮುದಾಯಕ್ಕೆ ಮಾತ್ರ ಮೀಸಲಾದ ಟ್ರಸ್ಟ್​ ಅಲ್ಲವಾದರೂ, ಆ ವರ್ಗಕ್ಕೆ ಮೀಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ. ಟ್ರಸ್ಟ್​ಗೆ ಬನಶಂಕರಿ 6ನೇ ಹಂತದಲ್ಲಿ 8,125 ಚ.ಮೀ. ಸಿಎ ನಿವೇಶನ ಮಂಜೂರಾಗಿದ್ದು, ಲೀಸ್​ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿತ್ತು. ಬಳಿಕ ಟ್ರಸ್ಟ್​ನ ಮನವಿಯ ಮೇರೆಗೆ ಬಿಟಿಎಂ 4ನೇ ಹಂತದಲ್ಲಿ 8,002 ಚ.ಮೀ. ವಿಸ್ತೀರ್ಣದ ಪರ್ಯಾಯ ನಿವೇಶನವನ್ನೂ ಮಂಜೂರು ಮಾಡಲಾಗಿತ್ತು. ಈ ಎಲ್ಲ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಮತ್ತು ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.