ನೆಲಮಂಗಲ ವ್ಯಾಪ್ತಿಯ ಮಲ್ಲಾಪುರ ಕೆರೆ ಬಳಿ ಬಿಸಾಡಿರುವ ವೈದ್ಯಕಿಯ ತ್ಯಾಜ್ಯವನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಪರಿಶೀಲಿಸಿದರು. ಆರೋಗ್ಯ ಇಲಾಖೆ ಆರೋಗ್ಯ ನಿರಿಕ್ಷಕ ಶೈಲೇಂದ್ರ, ನಗರಸಭೆ ಆರೋಗ್ಯ ನಿರೀಕ್ಷಕ ಉಮೇಶ್, ರಾಜಸ್ವ ನಿರೀಕ್ಷಕ ಚಂದ್ರಶೇಖರ್, ಗ್ರಾಮ ಆಡಳಿತಾಧಿಕಾರಿ ರೋಹಿತ್ ಇತರರು ಇದ್ದರು.
ನೆಲಮಂಗಲ : ನಗರಸಭೆ ವ್ಯಾಪ್ತಿಯ ಮಲ್ಲಾಪುರ ಕೆರೆ ಬಳಿ ವೈದ್ಯಕಿಯ ತ್ಯಾಜ್ಯ ಬಿಸಾಡಿದ್ದ ಹಿನ್ನಲೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಇತ್ತೀಚೆಗೆ ಕೆಲ ಮೆಡಿಕಲ್ ಸ್ಟೋರ್ನವರು ವೈದ್ಯಕಿಯ ತ್ಯಾಜ್ಯ ಬಿಸಾಡುತ್ತಿದ್ದು, ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ನೇತೃತ್ವದಲ್ಲಿ ಆರೋಗ್ಯಇಲಾಖೆ ಹಾಗೂ ನಗರಸಭೆ ಅಧಿಕಾರಗಳು ಸ್ಥಳ ಪರಿಶೀಲಿಸಿದರು.
3 ಪ್ರಕರಣ ಬೆಳಕಿಗೆ : ತಾಲೂಕಿನಲ್ಲಿ ಇತ್ತೀಚೆಗೆ ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಪಕ್ಕದಲ್ಲಿ ವೈದ್ಯಕಿಯ ತ್ಯಾಜ್ಯ ವಿಲೇವಾರಿ ಮಾಡಿದ್ದ ಪ್ರಕರಣ ದಾಖಲಾಗಿದ್ದು, ತ್ಯಾಜ್ಯ ವಿಲೇವಾರಿ ಮಾಡಿದ್ದ ಆಸ್ಪತ್ರೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು. ಆ ಪ್ರಕರಣ ಮಾಸುವ ಮೊದಲೇ ಮಲ್ಲಾಪುರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ, ಸಾರ್ವಜನಿಕರು ವೈದ್ಯಕಿಯ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಲಾಗಿದೆ. ತ್ಯಾಜ್ಯ ವಿಲೇವಾರಿ ಮಾಡಿದವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧಿಕಾರಿಗಳಿಗೆ ಸೂಚನೆ : ದಿನದಿಂದ ದಿನಕ್ಕೆ ತಾಲೂಕಿನಲ್ಲಿ ವೈದ್ಯಕಿಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಆಸ್ಪತ್ರೆ ಮಾಲೀಕರು ಹಾಗೂ ಸಿಬ್ಬಂದಿ ಸೇರಿ ಮೆಡಿಕಲ್ ಸ್ಟೊರ್ ಮಾಲೀಕರ ಸಭೆ ಕರೆದು ಅರಿವು ಮೂಡಿಸಬೇಕು ಎಂದು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.