- 6ನೇ ದಿನವೂ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಮುಂದುವರಿದಿದೆ
- ಲಗೇಜ್ ಪಡೆಯಲು ಡಬಲ್ ಟ್ರಬಲ್
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಬೆಂಗಳೂರು:ಸತತ 6ನೇ ದಿನವೂ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಮುಂದುವರಿದಿದೆ. ಬಹುತೇಕ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು ಸಾಕಷ್ಟು ತೊಂದರೆ ಅನುಭವಿಸಿದರು. ಕನೆಕ್ಟಿಂಗ್ ಫ್ಲೈಟ್ ಇರುವ ಪ್ರಯಾಣಿಕರು ಔಷಧ ಸೇರಿ ಮೌಲ್ಯಯುತ ವಸ್ತುಗಳು ಇರುವ ಲಗೇಜ್ ಪಡೆಯಲು ಡಬಲ್ ಟ್ರಬಲ್ ಎದುರಿಸುವಂತಾಯಿತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ದೆಹಲಿ, ಜಬಲ್ಪುರ, ದುರ್ಗಾಪುರ, ಹೈದರಾಬಾದ್, ರಾಯ್ಪುರ, ಕೊಚ್ಚಿ, ಭೂಪಾಲ್, ಗೋವಾ, ದೆಹಲಿ, ಭುವನೇಶ್ವರ, ಶ್ರೀನಗರ ಮತ್ತು ಗಾಜಿಯಾಬಾದ್ ಸೇರಿ ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ತೆರಳಬೇಕಿದ್ದ 70ಕ್ಕೂ ಅಧಿಕ ಇಂಡಿಗೋ ವಿಮಾನಗಳು ಭಾನುವಾರ ರದ್ದಾದವು.
ಇದರ ನಡುವೆ 48 ಗಂಟೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡುವಂತೆ ಕೇಂದ್ರ ಸರ್ಕಾರ, ಇಂಡಿಗೋ ವಿಮಾನಯಾನ ಸಂಸ್ಥೆಗೆ ತಾಕೀತು ಮಾಡಿದೆ. 15ದೊಳಗೆ ಈ ಸಮಸ್ಯೆ ಸರಿಪಡಿಸುವುದಾಗಿ ಪ್ರಯಾಣಿಕರಿಗೆ ಇಂಡಿಗೋ ಭರವಸೆ ನೀಡಿದೆ.
ಏರ್ ಇಂಡಿಯಾ ಸೇರಿ ಇತರ ವಿಮಾನ ಸಂಸ್ಥೆಗಳು ಬೆಂಗಳೂರಿನಿಂದ ದೆಹಲಿ, ಲಂಡನ್, ಪ್ಯಾರಿಸ್ ಸೇರಿ ದೇಶದ ವಿವಿಧ ಭಾಗದ ಫ್ಲೈಟ್ ದರವನ್ನು ಏಕಾಏಕಿ ಹೆಚ್ಚಿಸಿವೆ. ರದ್ದುಗೊಂಡ ವಿಮಾನ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತಿದೆ. 6 ದಿನಗಳಿಂದ ವಿಮಾನ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿದ್ದ ಪ್ರಯಾಣಿಕರ ಸಂಖ್ಯೆ ತುಸು ಇಳಿಮುಖವಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಏರ್ಪೋಟ್ ಆಡಳಿತ ಮಂಡಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದೆ.
ಲಗೇಗ್‌ಗಾಗಿ 8 ಗಂಟೆ ಕಾಯ್ದ ಪ್ರಯಾಣಿಕರು
ಬೆಂಗಳೂರಿನಿಂದ ಕೊಚ್ಚಿಗೆ ಕನೆಕ್ಟಿಂಗ್ ಫ್ಲೈಟ್ ರದ್ದು ಹಿನ್ನೆಲೆಯಲ್ಲಿ ಜರ್ಮನಿ ಪ್ರವಾಸಿಗ ಆಕ್ರೋಶ ವ್ಯಕ್ತಪಡಿಸಿದರು. ಬೇರೆ ಫ್ಲೈಟ್ ಇಲ್ಲದ ಕಾರಣ ಅನಿವಾರ್ಯವಾಗಿ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದಾರೆ. 2 ದಿನದಿಂದ ಒಂದೇ ಉಡುಪುನಲ್ಲಿ ಇದ್ದೇನೆ. ಲಗೇಜ್‌ನಲ್ಲಿ ಉಡುಪುಗಳಿವೆ. ಹಲವು ಗಂಟೆಯಿಂದ ಲಗೇಜ್‌ಗಾಗಿ ಕಾಯುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ ಎಂದು ಆಸ್ಟ್ರಿಯಾ ಪ್ರಜೆ, ಇಂಡಿಗೋ ಸಿಬ್ಬಂದಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಪ್ರಯಾಣಿಕರು, ಸತತ 8 ಗಂಟೆಯಿಂದ ಲಗೇಜ್‌ಗಾಗಿ ಕಾಯುವಂತಾಯಿತು. ಸೂಕ್ತ ಮಾಹಿತಿ ನೀಡದ ಪರಿಣಾಮ ಹಲವು ಪ್ರಯಾಣಿಕರು ಒಂದು ಕೌಂಟರ್‌ನಿಂದ ಇನ್ನೊಂದು ಕೌಂಟರ್‌ಗೆ ಅಲೆದಾಡಿದರು. ವಿಮಾನ ನಿಲ್ದಾಣದಲ್ಲಿ ತೆರಳಿದ್ದ ಕೆಲವರು, ಅಲ್ಲಿನ ಪರಿಸ್ಥಿತಿ ಕಂಡು ಆನ್‌ಲೈನ್‌ನಲ್ಲೇ ಫ್ಲೈಟ್ ರದ್ದುಗೊಳಿಸಿದರು.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ
6 ದಿನ ಕಳೆದರೂ ಇಂಡಿಗೋ ವಿಮಾನ ಹಾರಾಟ ಸ್ಥಗಿತ ಸಮಸ್ಯೆ ಬಗೆಹರಿಯದ ಕಾರಣ ಕನ್ನಡಪರ ಹೋರಾಟಗಾರರ ವಾಟಳ್ ನಾಗರಾಜ್, ಸಾದಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇಂಡಿಗೋ ವಿಮಾನದ ಮುಖ್ಯಸ್ಥರನ್ನು ಬಂಧಿಸಬೇಕು. ಈ ಸಮಸ್ಯೆಯು ತುರ್ತು ಪರಿಸ್ಥಿತಿಗಿಂತ ಭೀಕರವಾಗಿದೆ. ಸಾವಿರಾರು ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಅವಲೋಕಿಸಬೇಕಿತ್ತು. ಪ್ರಯಾಣಿಕರ ಕಷ್ಟವನ್ನು ಬಗೆಹರಿಸಲು ಅಧಿಕಾರಿಗಳನ್ನು ನೇಮಿಸಬೇಕಿತ್ತು ಎಂದು ವಾಟಾಳ್ ನಾಗರಾಜ್ ಹೇಳಿದರು.
ಡಿಸೆಂಬರ್ ತಿಂಗಳು ಪ್ರವಾಸದ ಸಮಯವಾಗಿದೆ. ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. 3-4 ತಿಂಗಳ ಹಿಂದೆ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿದವರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ. ಈ ಸಮಸ್ಯೆ ಬೇಗ ಬಗೆಹರಿಯುವಂತಾಗಲಿ.
- ಬಲಮುರಿ ಶ್ರೀನಿವಾಸ್, ಟ್ರಾವೆಲ್ ಏಜೆಂಟ್.