ಮುದ್ದೇಬಿಹಾಳ ತಾಲೂಕಿನ ಕಿಲಾರ ಹಟ್ಟಿ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಹಾಗೂ ಕಾಡಸಿದ್ಧೇಶ್ವರ ಜಾತ್ರೆ ಪ್ರಯುಕ್ತ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯಲ್ಲಿ ಶಾಸಕ ಸಿ.ಎಸ್. ನಾಡಗೌಡ ಮಾತನಾಡಿದರು. ವೀರಭದ್ರ ಮಹಾಸ್ವಾಮೀಜಿ, ಯರಝರಿ ಮಲ್ಲಾರಲಿಂಗ ಮಹಾರಾಜ, ಶ್ರೀ ರಮಾನಂದ ಮಹಾರಾಜರು ಮತ್ತಿತರರಿದ್ದರು.
- ಶಾಸಕ ಸಿ.ಎಸ್. ನಾಡಗೌಡ ಅಭಿಪ್ರಾಯ
- ಕಾಡಸಿದ್ಧೇಶ್ವರ ಜಾತ್ರೆ
ಮುದ್ದೇಬಿಹಾಳ: ಮಕ್ಕಳಿಗೆ ತಂದೆ-ತಾಯಿಗೆ ಗೌರವ ಕೊಡುವುದನ್ನು ಕಲಿಸಿ, ಸಮಾಜ ನಿರ್ಮಾಣದಲ್ಲಿ ದಂಪತಿಗಳು ದೂರ ದೃಷ್ಟಿ ಇಟ್ಟುಕೊಳ್ಳಬೇಕು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ತಾಲೂಕಿನ ಕಿಲಾರ ಹಟ್ಟಿ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಹಾಗೂ ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಕುಟುಂಬದ ಆರೋಗ್ಯ ಹಾಗೂ ಗೌರವ ಕಾಪಾಡಿಕೊಳ್ಳುವುದು ದೇಶ ನಿರ್ಮಾಣದಲ್ಲಿ ತೊಡಗಿದಂತೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿ ಅಗತೀರ್ಥದ ಶಾಂತಮಯ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಸತತ 20 ವರ್ಷಗಳಿಂದ ಸ್ವಂತ ಹಣದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಇಂದು ಯುವಕರು ಚಟಗಳ ದಾಸರಾಗಿದ್ದಾರೆ. ಸಮಾಜ ಮಾಂಸಾಹಾರ, ದುಂದು ವೆಚ್ಚ, ಮೂಢ ನಂಬಿಕೆಯತ್ತ ಸಾಗುತ್ತಿದೆ. ಗಂಡು ಮಕ್ಕಳು ಚಟಗಳ ದಾಸರಾಗುತ್ತಿರುವುದನ್ನು ತಪ್ಪಿಸಲು ಹೆಣ್ಣು ಮಕ್ಕಳು ಉಗ್ರ ರೂಪ ತಾಳಬೇಕು. ಮಹಿಳೆಯರು ಅತ್ತೆ ಮಾವಂದಿರನ್ನು ತಂದೆ-ತಾಯಿ ಎಂದು ತಿಳಿದು ಸಂಸಾರವನ್ನು ಗಟ್ಟಿ ಮಾಡಿಕೊಳ್ಳಿ ಎಂದು ಹೇಳಿದರು.
22 ಜೋಡಿ ವಧು-ವರರು ಹೊಸ ಜೀವನಕ್ಕೆ ಕಾಲಿಟ್ಟರು. ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ತಾಳಿಕೋಟೆ ಸಿದ್ಧಲಿಂಗ ದೇವರು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಅಂಕಲಿಮಠದ ವೀರಭದ್ರ ಮಹಾಸ್ವಾಮೀಜಿ, ಯರಝರಿ ಮಲ್ಲಾರಲಿಂಗ ಮಹಾರಾಜರು, ಶಿವಯ್ಯ ಗುರು, ಖಿಲಾರಹಟ್ಟಿ ಕಾಡಸಿದ್ಧೇಶ್ವರ ಮಠ ಶ್ರೀ ರಮಾನಂದ ಮಹಾರಾಜರು, ಅರವಿಂದ ಮಹಾರಾಜ ಒಡೆಯರ್, ದೊಡ್ಡ ಸಣ್ಣೆಕಪ್ಪ ಮುತ್ತಯ್ಯ ದೇವರು, ಕೆಂಚರಾಯ ಮುತ್ತಯ್ಯ ಸ್ವಾಮೀಜಿ, ಮಾಜಿ ಜಿ.ಪಂ. ಗಂಗಾಧರ ನಾಡಗೌಡ, ಎನ್.ಎಸ್. ಪೂಜಾರಿ, ಬಿ.ಕೆ. ಬಿರಾದಾರ, ಕೆ.ಆರ್. ಬಿರಾದಾರ ಮತ್ತಿತರರಿದ್ದರು.