ಗಾಂಧಿ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ನಾಡೋಜ ವೂಡೇ ಪಿ.ಕೃಷ್ಣ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು. ಸಚಿವರಾದ ಬಾಲಕೃಷ್ಣ, ರಿಜ್ವಾನ್ ಅರ್ಷದ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ಮತ್ತಿತರರಿದ್ದರು.  
ರಾಜ್ಯ

ದೇಶಕ್ಕೆ ಗಾಂಧಿತತ್ವದ ಅವಶ್ಯಕತೆ ಇದೆ; ಸಿಎಂ ಡಿಕೆಶಿ ಪ್ರತಿಪಾದನೆ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು : ಗಾಂಧೀಜಿಯವರ ತತ್ವಗಳನ್ನು ಇಡೀ ಜಗತ್ತು ಒಪ್ಪಿಕೊಂಡಿದ್ದು, ಅವರ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕೆ ಗಾಂಧಿತತ್ವದ ಅವಶ್ಯಕತೆ ಇದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಿಎಂ ನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಿದರು. ನಂತರ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿ ಸ್ಮಾರಕ ಸ್ತಂಭ ಅನಾವರಣಗೊಳಿಸಿ ಅಂತಿಮವಾಗಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರೂ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುತ್ತಾರೆ. ಅವರ ಪ್ರತಿಮೆಗೆ ಗೌರವ ಸಲ್ಲಿಸುತ್ತಾರೆ. ವಿದೇಶದಿಂದ ಬರುವ ಗಣ್ಯರೂ ರಾಜಘಾಟ್‌ಗೆ ತೆರಳಿ ಗೌರವ ಸಲ್ಲಿಸುತ್ತಾರೆ.

ಗಾಂಧೀಜಿ ಅವರನ್ನು ಜನ ಒಪ್ಪಿಕೊಂಡಿದ್ದಾರೆ, ವಿಶ್ವ ಒಪ್ಪಿಕೊಂಡಿದೆ. ಇಡೀ ವಿಶ್ವ ಗಾಂಧಿ ಜಯಂತಿಯನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತದೆ. ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ವಿಶ್ವಕ್ಕೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ನೀಡಿದ ಶ್ರೇಷ್ಠ ವ್ಯಕ್ತಿ. ಯಾವುದೇ ರಾಜಕೀಯ ಪಕ್ಷದವರು ಗಾಂಧೀಜಿ ವಿಚಾರಧಾರೆಯನ್ನು ಒಪ್ಪಿಕೊಳ್ಳಲು ಹಿಂಜರಿಯಬಾರದು ಎಂದು ಸಿಎಂ ಕರೆ ನೀಡಿದರು.

ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿಯ ಮುಖ್ಯಸ್ಥ ಹಾಗೂ ಅಪ್ಪಟ ಗಾಂಧಿವಾದಿ ನಾಡೋಜ ವೂಡೇ ಪಿ. ಕೃಷ್ಣ ಅವರಿಗೆ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವರಾದ ಬಾಲಕೃಷ್ಣ, ರಿಜ್ವಾನ್ ಅರ್ಷದ್, ಮಾಜಿ ಸಚಿವ ಎಚ್.ಕೆ. ಪಾಟೀಲ್, ವಾರ್ತಾ ಇಲಾಖೆ ಆಯುಕ್ತ ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.

ಗಾಂಧಿ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ ಸಾಧಕರನ್ನು ಸನ್ಮಾನಿಸಿದರು.

‘ರಾಜಕೀಯ ಪ್ರವೇಶಕ್ಕೆ ಗಾಂಧಿವಾದಿ ಪ್ರೇರಣೆ'

ಕನಕಪುರದಲ್ಲಿ ಎಸ್.ಕರಿಯಪ್ಪ ಎಂಬ ಗಾಂಧಿವಾದಿ ಶಾಸಕರಿದ್ದರು. ನಮ್ಮ ತಂದೆ ತಾಯಿ ನನ್ನನ್ನು ಅವರ ಕಾಲಿಗೆ ನಮಸ್ಕಾರ ಮಾಡಿಸಿದ್ದರು. ಅವರು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಜನರು ರಾಜಕಾರಣಿಗಳಿಗೆ ನೀಡುತ್ತಿದ್ದ ಗೌರವವನ್ನು ಕಂಡು ತಾನೂ ರಾಜಕಾರಣಕ್ಕೆ ಬರಬೇಕು ಎಂಬ ಆಲೋಚನೆ ಮೂಡಿತು. ನನ್ನ ರಾಜಕೀಯ ಪ್ರವೇಶಕ್ಕೆ ಗಾಂಧಿವಾದವೇ ಪ್ರೇರಣೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೊಂಡರು.