The controversial DySP office
ಹಿರಿಯ ಅಧಿಕಾರಿಗಳ ಸೂಚನೆಯಿದ್ದರೂ ಅತ್ತಿಬೆಲೆಯಲ್ಲಿನ ಡಿವೈಎಸ್ಪಿ ಕಚೇರಿ ತಾಲೂಕು ಕೇಂದ್ರ ಆನೇಕಲ್ಗೆ ಸ್ಥಳಾಂತರವಾಗದಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ.
ಹೆಬ್ಬಗೋಡಿಯಲ್ಲಿದ್ದ ಡಿವೈಎಸ್ಪಿ ಕಚೇರಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಚೇರಿಯನ್ನು ಆನೇಕಲ್ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಬೆಂ.ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸೂಚಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಕಚೇರಿ ಆನೇಕಲ್ಗೆ ಸ್ಥಳಾಂತರವಾಗದೆ ಅತ್ತಿಬೆಲೆಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ವಕೀಲರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಪ್ರತಿಕ್ರಿಯಿಸಿ, ಹೆಬ್ಬಗೋಡಿ ಠಾಣೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರಿದಾಗ ಡಿವೈಎಸ್ಪಿ ಕಚೇರಿಯನ್ನು ತುರ್ತಾಗಿ ಖಾಲಿ ಮಾಡಬೇಕಾಗಿತ್ತು. ಆನೇಕಲ್ ಪೊಲೀಸ್ ಠಾಣೆ ಮೇಲ್ಮಹಡಿಯಲ್ಲಿ ರಿಪೇರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕೆಲಸಗಳಿಗಾಗಿ ಅತ್ತಿಬೆಲೆಯಲ್ಲಿ ಕಚೇರಿ ವ್ಯವಸ್ಥೆ ಮಾಡಲಾಗಿದೆ. ಆದರೆ ತಾಲೂಕು ಕೇಂದ್ರ ಸ್ಥಾನದಲ್ಲೇ ಡಿವೈಎಸ್ಪಿ ಕಚೇರಿ ಇರುವುದು ಸೂಕ್ತವಾಗಿದ್ದು, ಆನೇಕಲ್ಗೆ ಕಚೇರಿ ಸ್ಥಳಾಂತರಿಸುವಂತೆ ಡಿವೈಎಸ್ಪಿಗೆ ಸೂಚನೆ ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಪಟ್ಟಣದಲ್ಲೇ ತಾಲೂಕು ಕಚೇರಿ, ನ್ಯಾಯಾಲಯ, ಎಸಿ ಕೋರ್ಟ್, ತಾಲೂಕು ಆಸ್ಪತ್ರೆ ಸೇರಿ ಪ್ರಮುಖ ಸರ್ಕಾರಿ ಕಚೇರಿಗಳಿವೆ. ಹೀಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಕಚೇರಿಯೂ ತಾಲೂಕು ಕೇಂದ್ರದಲ್ಲಿರಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಡಿವೈಎಸ್ಪಿ ಕಚೇರಿ ಅತ್ತಿಬೆಲೆಯಲ್ಲಿ ಇರುವುದರಿಂದ ಪೊಲೀಸ್ ಠಾಣೆಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗದ ಸಂದರ್ಭದಲ್ಲಿ ಮೇಲಧಿಕಾರಿಗಳ ಬಳಿ ದೂರು ನೀಡಲು ತೆರಳುವ ಸಾರ್ವಜನಿಕರು 20 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗಿದೆ. ಡಿವೈಎಸ್ಪಿ ಕಚೇರಿಗೆ ಸಾರ್ವಜನಿಕರು ಹಾಗೂ ವಕೀಲರು ಹೋದಾಗ ಅಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದಾಗಿ ದೂರದ ಪ್ರದೇಶಗಳಿಂದ ಬರುವ ಸಾರ್ವಜನಿಕರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಕೀಲರ ತಂಡ ಗೃಹ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿಗೆ ದೂರು ಸಲ್ಲಿಸಿದ್ದು, ಕೂಡಲೇ ಡಿವೈಎಸ್ಪಿ ಕಚೇರಿಯನ್ನು ತಾಲೂಕಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ. ಕಚೇರಿಯನ್ನು ತಾಲೂಕಿಗೆ ಶ್ರೀ ಸ್ಥಳಾಂತರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.