ಬಸವನಬಾಗೇವಾಡಿಯ ಯಲ್ಲಾಲಿಂಗ ಮಠ ಕಲ್ಯಾಣ ಮಂಟಪದಲ್ಲಿ ನಾಟಕ ಬರಹಗಾರರಿಂದ ಹಮ್ಮಿಕೊಂಡಿದ್ದ ಡಾ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವದ ಸಮಾರಂಭ ಕಾರ್ಯಕ್ರಮವನ್ನು ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು. ಯಮನಪ್ಪ ಅಂಗನಗೇರಿ, ಡಿ.ಆರ್. ಪೂಜಾರಿ, ಗುರಪ್ಪ ಪಾಟೀಲ, ಸುರೇಶ ಹಾರಿವಾಳ ಮತ್ತಿತರರಿದ್ದರು. 
ರಾಜ್ಯ

ಸಮಾಜಕ್ಕೆ ಕಲಾವಿದರ, ಬರಹಗಾರರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜುಗೌಡ ಪಾಟೀಲ ಅಭಿಮತ
  • ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ
ಬಸವನಬಾಗೇವಾಡಿ : ಭಾರತ ದೇಶದ ಕಲೆ, ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯವನ್ನು ಈ ನಾಡಿನ ಕಲಾವಿದರು, ಕವಿಗಳು ಮತ್ತು ನಾಟಕ ಬರಹಗಾರರು ನಿರಂತರ ಸೇವೆ ಸಲ್ಲಿಸಿದ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀಯಲ್ಲಾಲಿಂಗ ಮಠ ಕಲ್ಯಾಣ ಮಂಟಪದಲ್ಲಿ ನಾಟಕ ಬರಹಗಾರರಿಂದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ, ಮರಣ ಸಂಚಿಕೆ ಬಿಡುಗಡೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರ ಮಾತನಾಡಿದರು.
ಹಿಂದಿನ ಕಾಲದಲ್ಲಿ ಅನೇಕ ನಾಟಕಗಳನ್ನು ನೋಡಿ ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಕಲಾವಿದರು ಕವಿಗಳಿಂದ ಸಮಾಜದಲ್ಲಿರುವ ಅನೇಕ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸುವ ಶಕ್ತಿ ಸಾಮರ್ಥ್ಯ ಮಾಡಿದ್ದಾರೆ. ಕಲಾವಿದರು, ಕವಿಗಳು ಮತ್ತು ನಾಟಕ ಬರಹಗಾರ ಕುಟುಂಬದ ಜೀವನ ಅತ್ಯಂತ ಸಮಸ್ಯೆದ ಸುಳಿಯಲ್ಲಿ ಸಿಲುಕಿದೆ ಅವರ ಕುಟುಂಬದ ಜೀವನ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಯೋಜನೆಗಳನ್ನು ರೂಪಿಸಿ ಅವರ ಬದುಕಿನ ಬಂಡಿಯನ್ನು ಸಾಗಿಸುವ ಕಾರ್ಯ ಮಾಡಬೇಕಾಗಿದೆ. ಆಧುನಿಕ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಭರಾಟೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಪ್ರದಾಯ ಮರೀಚಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ ಎಂದು ಹೇಳಿದರು.
ಕ.ರಾ.ನಾ.ಬ.ಕ.ಸಂಘ ಅಧ್ಯಕ್ಷ ಶಂಕರಜಿ ಹೂವಿನಹಿಪ್ಪರಗಿ ಮಾತನಾಡಿ, ರಾಜ್ಯದ ನಾಟಕ ಬರಹಗಾರರು, ಕಲಾವಿದರು, ಕವಿಗಳು ಆರ್ಥಿಕವಾಗಿ ಅತ್ಯಂತ ಹಿಂದುಳಿದವರು. ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ಮಾಸಾಸನ ಪಡೆಯುತ್ತಿದ್ದಾರೆ. ಸರ್ಕಾರ ಕಲಾವಿದರ, ಬರಗಾರರ, ಕವಿಗಳ ನೆರವಿಗೆ ಬರಬೇಕು ಎಂದು ಹೇಳಿದರು.
ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ರಂಗಮಂದಿರ ಬಿಟ್ಟರೆ ಬಹುತೇಕ ಜಿಲ್ಲೆಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ರಂಗಮಂದಿರ ಇರದೇ ಹಿನ್ನೆಲೆಯಲ್ಲಿ ನಾಟಕವನ್ನು ಪ್ರದರ್ಶನ ಮಾಡಲು ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿ ತಾಲೂಕು ಜಿಲ್ಲೆಗೊಂದು ರಂಗಮಂದಿರ ಸರ್ಕಾರ ನಿರ್ಮಿಸಿದರೆ ನಾಟಕ ಪ್ರದರ್ಶಿಸಲು ಸಹಕಾರವಾಗುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಯಮನಪ್ಪ ಅಂಗನಗೇರಿ ಮಾತನಾಡಿದರು. ಜಿಲ್ಲೆಯಲ್ಲಿ ಕಲಾಭವನ ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸಲು ಶಾಸಕರಿಗೆ ಸಲ್ಲಿಸಿದರು.
ಡಿ.ಆರ್. ಪೂಜಾರಿ, ಗುರಪ್ಪ ಪಾಟೀಲ, ಸುರೇಶ ಹಾರಿವಾಳ, ಬಸನಗೌಡ ಪಾಟೀಲ, ಅಪ್ಪಗೌಡ ಬಿರಾದಾರ, ದತ್ತಾತ್ರೇಯ ಹೊಸಮಠ, ಪ್ರಭುಲಿಂಗ ಹೂಗಾರ, ಜಗದೀಶ ಪಾಟೀಲ, ಪ್ರೇಮಕುಮಾರ ರಾಯಪ್ಪಗೋಳ, ರಾಜುಗೌಡ ನಾಡಗೌಡ, ಅಶೋಕ ಚಲವಾದಿ, ಶಿವಾನಂದ ಡೋಣೂರು ಮತ್ತಿತರರಿದ್ದರು.
ಗುಂಡು ಕುಂಬಾರ ಸ್ವಾಗತಿಸಿದರು, ಸಿದ್ದಪ್ಪ ಅಲಗೊಂಡ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಉಮ್ಮರಗಿ ವಂದಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಮಿಸಿದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.