- ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯ ವಿಶ್ವಾಸ
- ಗುರುಕುಲಾಶ್ರಮದಲ್ಲಿ ಪ್ರಮುಖರ ಸಭೆ
ಬಸವಕಲ್ಯಾಣ: ಕನ್ಹೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಗರದಲ್ಲಿ ಜೂ.28ರಂದು ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಯಶಸ್ವಿಯಾಗಿ ನಡೆಯಲಿದೆ ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ತಡೋಳಾ&ಮೇಹಕರ್ನ ಶ್ರೀ ರಾಜೇಶ್ವರ ಶಿವಾಚಾರ್ಯರು ಹೇಳಿದ್ದಾರೆ.
ತಡೋಳಾ ಗುರುಕುಲಾಶ್ರಮದಲ್ಲಿ ಗುರುವಾರ ಕರೆದಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕೋರಿದ್ದು, ಸಿಕ್ಕೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಮಠಾಧೀಶರ ಒಕ್ಕೂಟ, ಹಿಂದೂ ಸರ್ವ ಸಮಾಜಗಳ ಒಕ್ಕೂಟ ಮತ್ತು ಸಮಾವೇಶ ಉತ್ಸವ ಸಮಿತಿ ಸಹಯೋಗದಡಿ ಧರ್ಮ, ಪರಿಸರ ರಕ್ಷಣೆ ಮತ್ತು ಕೃಷಿಕರ ಕಲ್ಯಾಣದ ಮಹಾ ಸಂಕಲ್ಪದೊಂದಿಗೆ ಐತಿಹಾಸಿಕ ಸಮಾವೇಶ ನಡೆದೇ ನಡೆಯುತ್ತದೆ. ಇನ್ನು ಪರ ಮತ್ತು ವಿರೋಧ ವ್ಯಕ್ತಪಡಿಸುವ ಮಠಾಧೀಶರು, ಸರ್ವ ಸಮುದಾಯದ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಜಾತಿರಹಿತ ಎಲ್ಲ ಸಮುದಾಯದ ಶರಣರನ್ನು ಬಿಂಬಿಸುವ ಹಾಗೂ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಸಮಾವೇಶ ಇದಾಗಿದ್ದು, ವಿವಿಧೆಡೆಯ 300ಕ್ಕೂ ಅಧಿಕ ಪೂಜ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾವೇಶ ನಿಮಿತ್ತ ಅಂದು ಮಹಾತ್ಮ ಬಸವೇಶ್ವರ ದೇವಸ್ಥಾನದಿಂದ ಅಕ್ಕಮಹಾದೇವಿ ಕಾಲೇಜು ಮೈದಾನವರೆಗೆ ಭವ್ಯ ಮೆರವಣಿಗೆ ನಂತರ ಸಮಾವೇಶ ನಡೆಯಲಿದೆ. ಸಾವಿರಾರು ಮಾತೆಯರಿಂದ ಪೂರ್ಣ ಕುಂಭಕಳಸ (ಮಂಗಳ ಕಳಸ), ಜನಪದ ಕಲಾ ತಂಡಗಳ ಪ್ರದರ್ಶನ ಮೆರವಣಿಗೆ ಮೆರುಗು ಹೆಚ್ಚಿಸಲಿದೆ ಎಂದು ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯ ತಿಳಿಸಿದರು.