ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಸಮ್ಮೇಳನದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಮಲಯಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ದರಾಜು ಸ್ವಾಮೀಜಿ, ಶ್ರೀ ಬಸವರಮಾನಂದ ಸ್ವಾಮೀಜಿ ಇತರರು ಇದ್ದರು.
ದಾಬಸ್ಪೇಟೆ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಗೌರವಿಸುವುದು ಉತ್ತಮ ಕಾರ್ಯ ಎಂದು ತುಮಕೂರಿನ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೊನ್ನಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಠದ ಸಂಪ್ರದಾಯದಂತೆ ಲಿಂಗದೀಕ್ಷೆ (ಮಡೆ ಆರತಿ) ಸಿದ್ಧಲಿಂಗ ಶಿವಾಚಾರ್ಯ ಶ್ರೀ ಮತ್ತು ಹಲವು ಪ್ರಶಸ್ತಿ ಪ್ರದಾನ, ಶಿವಾನುಭವ ಸಮ್ಮೇಳನ ಕಾರ್ಯಕ್ರಮಗಳ ಮೂಲಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಶ್ರೀ ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಅವರ ಶ್ರಮ ಮತ್ತು ಸಾಧನೆ ಶ್ಲಾನೀಯ ಎಂದು ಹೇಳಿದರು.
ಮಠದಲ್ಲಿ ಬಡ ಮಕ್ಕಳಿಗೆ ವಿದ್ಯೆ ಅನ್ನ ನೀಡಿ ದಾಸೋಹದ ಕಲ್ಪನೆ ಆರಂಭಿಸಿದ ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಆದರ್ಶಗಳನ್ನು ಪಾಲಿಸುತ್ತಾ ಬಂದಿರುವ ರುದ್ರಮುನಿಶಿವಾಚಾರ್ಯ ಶ್ರೀಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುಗಳಾದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಸಂಜೀವಿನಿಯಾಗಿ ಮಠವನ್ನು ಬೆಳೆಸಲು ಪ್ರೇರಣೆಯಾಗಿದೆ. ಬಡಮಕ್ಕಳಿಗೆ ಆಶ್ರಯ, ಶಿಕ್ಷಣ ಸಂಸ್ಥೆಗಳು, ಗೋಶಾಲೆ, ಪ್ರಾರ್ಥನಾ ಮಂದಿರ, ವಿಭೂತಿ ತಯಾರಿಕೆ ಘಟಕ, ಅನುಭವ ಮಂಟಪ, ದಾಸೋಹಮಂದಿರ, ಬೃಂಗಿಮಠದ ಮರು ನಿರ್ಮಿಸುವ ಮೂಲಕ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ತಪೋವನದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ದಾಸೋಹದ ವಿಶ್ವವಿದ್ಯಾಲಯ ಕಟ್ಟಿ ಬೆಳೆಸಿದವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹಾಕಿಕೊಟ್ಟ ದಾಸೋಹ ಕಲ್ಲನೆಯನ್ನು ವೀರಶೈವ ಲಿಂಗಾಯತ ಮಠಗಳು ಮತ್ತಷ್ಟು ಬೆಳೆಸುವ ಮೂಲಕ ಸಮಾಜದಲ್ಲಿ ಕೆಳಮಟ್ಟದವರು ಶಿಕ್ಷಣ ಪಡೆಯಲು ಅನುಕೂಲ ಮಾಡಬೇಕಿದೆ ಎಂದರು.
ಸನ್ಮಾನಿತರು: ಉದ್ಯಮಿ ಮಹೇಶ್, ನಿವೃತ್ತ ಪ್ರಾಂಶುಪಾಲ ಸುಬ್ಬಯ್ಯ, ರಾಜಶೇಖರಯ್ಯ ಮತ್ತು ಶಿವಗಂಗಮ್ಮ, ಉದ್ಯಮಿ ನಂಜುಂಡಸ್ವಾಮಿ, ವೀರಭದ್ರಪ್ಪ, ನೀಲಮ್ಮ, ವನಜಾ ಶಿವಕುಮಾರ್, ಮಂಜುಳಾ ಸುರೇಶ್, ವಕೀಲ ಸತೀಶ್ಕುಮಾರ್, ಪರಮಶಿವು, ವೆಂಕಟಚಲ, ಗಂಗಾಧರ್, ರುದ್ರಯ್ಯ, ಕೀರ್ತಿಶೇಖರ್, ಗೌರಿಶಂಕರ್, ಶೇಖರ್, ಮಂಜುನಾಥ್, ಪಾವನಾ, ಸಿದ್ದಗಂಗಪ್ಪ, ಸಿದ್ದಲಿಂಗಸ್ವಾಮಿ, ಆಶಿಕಾ, ಮಂಜುನಾಥ್, ನಿರಂಜನ ಮತ್ತು ಗಂಗಾಧರಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಪಡಗೂರು ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮರಿಸ್ವಾಮಿ, ಸಾಹಿತಿ ಶೈಲಜಾ ಮಾತನಾಡಿದರು. ವೀರಶೈವ ಸಮಾಜದ ಮುಖಂಡರಾದ ಎನ್.ಎಸ್.ಶಾಂತಕುಮಾರ್, ರೇವಣಸಿದ್ದಯ್ಯ, ರಾಜಮ್ಮ, ಉಮೇಶ್, ಸುರೇಶ್ ಇತರರು ಇದ್ದರು.