ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿ
ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಪೋಷಕಾಂಶ ಪದಾರ್ಥ ವಿತರಿಸುವ ಮಹತ್ವಾಕಾಂಕ್ಷಿ ‘ಇಂದಿರಾ ಕಿಟ್’ ಯೋಜನೆ ಆರಂಭಗೊಳ್ಳುವ ಮುನ್ನವೇ ಸ್ಥಗಿತಗೊಳ್ಳುವ ಕುರಿತು ಜು.3ರಂದು ‘ವಿಜಯವಾಣಿ’ ಪ್ರಕಟಿಸಿದ್ದ ವರದಿ ಆಧಾರಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ‘ಎಕ್ಸ್’ನಲ್ಲಿ ಕಿಡಿಕಾರಿವೆ.
ರಾಜ್ಯದ ಬಡವರಿಗೆ ಇಂದಿರಾ ಕಿಟ್ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈಗ ಆರಂಭಕ್ಕೂ ಮುನ್ನವೇ ಯೋಜನೆಗೆ ಎಳ್ಳುನೀರು ಬಿಟ್ಟಿದೆ. ತಮಗೆ ಬೇಕಾದವರಿಗೆ ಟೆಂಡರ್ ಕೊಡಿಸಲು ಸರ್ಕಾರದ ಮಟ್ಟದಲ್ಲೇ ದೊಡ್ಡ ಲಾಬಿ ನಡೆಯುತ್ತಿದೆ. ಕೇವಲ ಒಂದು ಟೆಂಡರ್ ಪ್ರಕ್ರಿಯೆಯನ್ನು 8 ತಿಂಗಳಾದರೂ ಅಂತಿಮಗೊಳಿಸಲು ಸಾಧ್ಯವಾಗದ ಭ್ರಷ್ಟ ಸರ್ಕಾರದ ಆಡಳಿತ ವೈಖರಿ ಅತ್ಯಂತ ಶೋಚನೀಯವಾಗಿದೆ. ಈ ವಿಳಂಬ,ಲಾಬಿಯೇ ಕಮಿಷನ್ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಬಯಲು ಮಾಡಿದೆ ಎಂದು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ಸರ್ಕಾರದ ವಿರುದ್ಧ ಲೇವಡಿ ಮಾಡಿದೆ.
ಪಡಿತರ ಪದಾರ್ಥಗಳು ಕಳ್ಳಸಂತೆಗೆ ಹೋಗದಂತೆ ತಡೆಯುತ್ತೇವೆ ಎಂದು ಭಾಷಣ ಬಿಗಿದವರು. ಈಗ ತಾವೇ ಕಮಿಷನ್ ಕಳ್ಳಸಂತೆಯಲ್ಲಿ ಮುಳುಗಿದ್ದಾರೆ. ಆರ್ಥಿಕ ಹೊರೆ ಹಾಗೂ ಪೂರೈಕೆ ಸವಾಲಿನ ನೆಪವೊಡ್ಡಿ ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರನ್ನು ಯಾಮಾರಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿ ಮುಖ ಈಗ ಅನಾವರಣಗೊಂಡಿದೆ. ಇದು ಹಸಿವು ಮುಕ್ತ ಕರ್ನಾಟಕ ಅಲ್ಲ, ಇದು ನೈಜ ಕಮಿಷನ್ ಕರ್ನಾಟಕ ಎಂದು ಸರ್ಕಾರವನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ದಿವಾಳಿ ಸರ್ಕಾರದಲ್ಲಿ ’ಇಂದಿರಾ ಕಿಟ್’ಗೂ ಕಟ್!
ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಹುಪ್ರಚಾರಿತ ಭರವಸೆ ನೆಲಕಚ್ಚಿದೆ. ‘ಇಂದಿರಾ ಕಿಟ್’ ನೀಡುವುದಾಗಿ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ, ಯೋಜನೆ ಜಾರಿಯಾಗುವ ಮೊದಲೇ ಕೈಬಿಡಲಾಗಿದೆ ಎಂಬ ವರದಿಗಳು ಸರ್ಕಾರದ ಅಸಮರ್ಥತೆ, ದಿವಾಳಿತನ, ಆಡಳಿತ ವೈಫಲ್ಯವನ್ನು ಬಯಲಿಗೆಳೆದಿವೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್, ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಟೆಂಡರ್ ಪ್ರಕ್ರಿಯೆ ವಿವಾದ, ಆಡಳಿತಾತ್ಮಕ ಗೊಂದಲ, ಭಾರೀ ವಿಳಂಬದ ನಡುವೆ ಸಿಲುಕಿ, ಎಂಟು ತಿಂಗಳಾದರೂ ಅಂತಿಮಗೊಳ್ಳಲಿಲ್ಲ. ಈಗ ಇಡೀ ಯೋಜನೆಯನ್ನೇ ಕೈಬಿಟ್ಟಿರುವುದು, ನಾಡಿನ ಕೋಟ್ಯಂತರ ಬಡ ಕುಟುಂಬಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಮೊದಲು ಭರ್ಜರಿ ಘೋಷಣೆ... ನಂತರ ಕೋಟ್ಯಾಂತರ ರೂಪಾಯಿ ಪ್ರಚಾರ... ಕೊನೆಗೆ ಮೌನವಾಗಿ ಯೋಜನೆಗೆ ಕತ್ತರಿ. ಇದೇನಾ ನಿಮ್ಮ ಕರ್ನಾಟಕ ಮಾದರಿ? ಎಂದು ಸರ್ಕಾರವನ್ನು ಪ್ರಶ್ನಿಸಿರುವ ಅಶೋಕ್, ಜನರ ವಿಶ್ವಾಸದೊಂದಿಗೆ ಆಟವಾಡಿ, ಬಡವರ ಹೆಸರಿನಲ್ಲಿ ರಾಜಕೀಯ ಮಾಡಿ, ಕೊನೆಗೆ ಅವರ ಪಾಲಿನ ಯೋಜನೆಗಳನ್ನೇ ಕೈಬಿಡುವ ಸರ್ಕಾರಕ್ಕೆ ಜನತಾ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ. ‘ಘೋಷಣೆ ಬೆಟ್ಟದಷ್ಟು... ಸಾಧನೆ ಶೂನ್ಯ’, ಭರವಸೆ ಕಾಂಗ್ರೆಸ್‌ನದು... ಮೋಸ ಮಾತ್ರ ಬಡವರ ಪಾಲು’. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಈ ಜನವಿರೋಧಿ, ವಿಶ್ವಾಸಘಾತುಕ ಆಡಳಿತಕ್ಕೆ ಮತಪೆಟ್ಟಿಗೆ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.