ಕೊರಟಗೆರೆ: -ಡಾ.ಜಿ.ಪರಮೇಶ್ವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಪರಮೇಶ್ವರ ಸಿಎಂ ಆಗಲೇಬೇಕೆಂಬ ಘೋಷಣೆಯೊಂದಿಗೆ ಸಾವಿರಾರು ಅಭಿಮಾನಿಗಳು ಬೀದಿಗಿಳಿದು ಒತ್ತಾಯಿಸಿದರು.
ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಿಂದ ಪಟ್ಟಣ ಮುಖ್ಯ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ದಲಿತ ಸಿಎಂ ಕೂಗು ಮೊಳಗಿತು. ಸಂವಿಧಾನ ಬರೆದವರಿಗೆ ಸಂವಿಧಾನ ಆಳುವ ಹಕ್ಕಿಲ್ಲವೇ? ಎಂಬ ಘೋಷಣೆ ಗಮನ ಸೆಳೆಯಿತು.
ತುಮಕೂಕೂರು ಗ್ರಾಮಾಂತರ ತಾಲೂಕಿನ ಅಟವಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಕೊಡುಗೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇವರೊಬ್ಬ ಸರ್ವಜನಾಂಗದ ನಾಯಕ. ಇವರು ಜಾತಿ-, ಧರ್ಮ ಮೀರಿದ್ದಾರೆ. ಸಂವಿಧಾನಾತ್ಮಕ ಮೌಲ್ಯಗಳ ಪ್ರತಿಬಿಂಬವಾಗಿದ್ದು, ಇಂತಹ ಮಹಾ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಡುವುದು ಅನ್ಯಾಯ. ಪರಮೇಶ್ವರ ಸಿಎಂ ಆಗಲೇಬೇಕು, ಈ ಸ್ಥಾನಕ್ಕೆ ಇವರೊಬ್ಬ ಅರ್ಹವ್ಯಕ್ತಿ ಎಂದು ಒತ್ತಾಯಿಸಿದರು.
ತಾಲೂಕಿನ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಾಗೇಂದ್ರಸ್ವಾಮೀಜಿ ಮಾತನಾಡಿ, ಪರಮೇಶ್ವರ ದೀರ್ಘಾವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಹಲವು ಖಾತೆಗಳ ಮಂತ್ರಿಯಾಗಿ ಅಪಾರ ಅನುಭವ ಹೊಂದಿರುವ ನಾಯಕ. ಇಂತಹ ನಾಯಕನನ್ನು ಕಾಂಗ್ರೆಸ್ ಹೈಕಮಾಂಡ್ ರ್ನಿಲಕ್ಷಿಸಬಾರದು. ಇವರಿಗೆ ಸಿಗಬೇಕಿರುವ ಸಿಎಂ ಸ್ಥಾನವನ್ನು ಅದರಲ್ಲೂ ಒರ್ವ ದಲಿತ ನಾಯಕನಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
cm ಮೆರವಣಿಗೆಯಲ್ಲಿ ತಾಲೂಕಿನ ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಪೀಠಾಧ್ಯಕ್ಷ ಶ್ರೀ ಬಸವರ ಮಹಾಲಿಂಗ ಸ್ವಾಮೀಜಿ , ಮಧುಗಿರಿ ತಾಲೂಕಿನ ತಗ್ಗಿಹಳ್ಳಿ ರಾಮಕೃಷ್ಣ ಮಠದ ಶ್ರೀ ರಮಾನಂದ ಸ್ವಾಮೀಜಿ, ಹಿರಿಯೂರು ಆಧಿಜಾಂಭವ ಮಠ ಶ್ರೀ ಷಡಕ್ಷರಿರುದ್ರಮುನಿ ಸ್ವಾಮೀಜಿ ಭಾಗವಹಿಸಿ ಒಕ್ಕೊರಲಿನಲ್ಲಿ ಪರಮೇಶ್ವರ ಸಿಎಂ ಮಾಡುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಜಿ.ಪರಮೇಶ್ವರ ಅವರನ್ನು ಕೇವಲ ವೋಟ್ ಬ್ಯಾಂಕ್ಗಾಗಿ ಮಾತ್ರ ಬಳಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಅವರ ಶ್ರಮದ ಮೇಲೆ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬಂತು ಆಗಲು ಸಿಎಂ ಮಾಡಿಲ್ಲ. ಈಗ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮೀನಮೇಷ ಎಣಿಸುತ್ತಿದೆ. ಹಲವು ಮುಖಂಡರು ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡದೇ ಇದ್ದರೆ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೈಕಮಾಂಡ್ಗೆ ಬಹಿರಂಗ ಎಚ್ಚರಿಕೆ ರವಾನಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶಾಮಣ್ಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್ ಗ್ರಾಮಾಂತರ ಬ್ಲಾಕ್ ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಘಟಕದ ಅಧ್ಯಕ್ಷ ಬೈರೇಶ್, ಮಾಜಿ ಯುವ ಘಟಕದ ವಿನಯ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್ ಓಬರಾಜು, ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಡಿ ಪ್ರಸನ್ನಕುಮಾರ್, ಮುಖಂಡರಾದ ಟಿ.ಡಿ.ದಿನೇಶ್, ಎಚ್.ಕೆ.ಮಹಾಲಿಂಗಯ್ಯ, ಎಲ್.ರಾಜಣ್ಣ, ಗಣೇಶ್, ರುದ್ರಪ್ರಸಾದ್, ಕೆಂಪರಾಮಯ್ಯ, ಕಾರ್ ಮಹೇಶ್, ಕವಿತಾ, ನಾಗರತ್ಮಮ್ಮ, ಮಂಜುಳಾ ಮತ್ತಿತರರು ಇದ್ದರು.