ಯಾದಗಿರಿ ನಗರದ ಶಾಸಿ ಚೌಕ್​ನಿಂದ ಹೊಸ ಬಸ್​ ನಿಲ್ದಾಣ ರಸ್ತೆಯಲ್ಲಿ ಕಾಣೆಯಾದ ಪುಟ್​ಪಾತ್​ ಶುಕ್ರವಾರ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​ ಪರಿಶೀಲಿಸಿದರು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್​ ಇತರರಿದ್ದರು. 
ರಾಜ್ಯ

ತಡವಾಗಿ ಎಚ್ಚೆತ್ತ ನಗರಸಭೆ, ಯುಡಾ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕೇಂದ್ರದಲ್ಲಿ ಕಾಣೆಯಾದ ಪುಟ್​ಪಾತ್​ಗಳ ಹುಡುಕಾಟ
  • ಕಬಳಿಸಿದವರು ತೆರವುಗೊಳಿಸಲು ತಾಕೀತು
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರಿಗಳು ಇತರರಿಂದ ಒತ್ತುವರಿಯಾಗಿರುವ ಪುಟ್​ಪಾತ್​ ಹುಡುಕಾಟ ಶುರು ಮಾಡಿರುವ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರ, ಸಾರ್ವಜನಿಕರಿಗೆ ನಡೆದುಕೊಂಡು ಹೊಗಲು ಅನುವು ಆಗುವಂತೆ ಕ್ರಮ ಕೈಗೊಳ್ಳಲು ಮುಂದಾಗಿವೆ.
31 ವಾರ್ಡ್​ ಜತೆ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರದ ಮುಖ್ಯ ರಸ್ತೆ ಮತ್ತು ಒಳರಸ್ತೆಗಳಲ್ಲಿದ್ದ ಪುಟ್​ಪಾತ್​ಗಳು ಸಂಪೂರ್ಣ ಮಾಯಾವಾಗಿವೆ. ಮಳಿಗೆಗಳ ಮುಂದಿನ ಪುಟ್​ಪಾತ್​ ಅತಿಕ್ರಮಕ್ಕೆ ಒಳಗಾಗಿ ದಶಕಗಳೇ ಕಳೆದಿದೆ. ಒಂದು ರೀತಿಯಲ್ಲಿ ಪುಟ್​ಪಾತ್​ಗಳಿಲ್ಲದ ನಗರವೆಂದರೂ ತಪ್ಪಾಗಲಿಕ್ಕಿಲ್ಲ.
ಇಂತಹ ನಗರದಲ್ಲಿ ತಡವಾದರೂ ಎಚ್ಚೆತ್ತುಕೊಂಡಿರುವ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಅವರು ತಮ್ಮ ಇಲಾಖೆ ತಂಡದೊಂದಿಗೆ ಒತ್ತುವರಿಯಾಗಿರುವ ಪುಟ್​ಪಾತ್​ಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಆರಂಭಿಕ ಹಂತದಲ್ಲಿ ಶಾಸಿ ಚೌಕ್​ನಿಂದ ಹೊಸ ಬಸ್​ ನಿಲ್ದಾಣ ರಸ್ತೆಯನ್ನು ಎರಡು ದಿನ ಹಿಂದೆ ಪರಿಶೀಲಿಸಿ ಸ್ಥಳ ಗುರುತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪುಟ್​ಪಾತ್​ ರಸ್ತೆ ಕಬಳಿಸಿದವರು ತಾವಾಗಿಯೇ ತೆರವುಗೊಳಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಿದೆ. ಇದೇ ರೀತಿ ಬರುವ ದಿನಗಳಲ್ಲಿ ಇಡೀ ನಗರದಲ್ಲಿ ಕಾಣೆಯಾಗಿರುವ ಪುಟ್​ಪಾತ್​ಗಳನ್ನು ಹುಡುಕಿ ಕಬಳಿಕೆದಾರರಿಂದ ಬಿಡಿಸಿ ರಸ್ತೆ ನಿರ್ಮಾಣದ ಯೋಜನೆ ಹೊಂದಲಾಗಿದೆ. ಕಾರಣ ಅತಿಕ್ರಮಣ ಮಾಡಿರುವ ಪುಟ್​ಪಾತ್​ ರಸ್ತೆ ಜಾಗವನ್ನು ತಾವಾಗಿಯೇ ತೆರವುಗೊಳಿಸಬೇಕು ಎಂದು ಪೌರಾಯುಕ್ತ ಉಮೇಶ ಚವ್ಹಾಣ್​ ಮತ್ತು ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಮನವಿ ಮಾಡಿದ್ದಾರೆ.
"

ನಗರವೆಂದ ಮೇಲೆ ಅಲ್ಲಲ್ಲಿ ಪುಟ್​ಪಾತ್​ ರಸ್ತೆ ಇರಲೇಬೇಕು. ಆದರೆ ಜಿಲ್ಲಾ ಕೇಂದ್ರದ ಬಹುತೇಕ ಕಡೆ ಈ ರಸ್ತೆಗಳೇ ಕಾಣಿಸುತ್ತಿಲ್ಲ. ನಗರಸಭೆ ಮತ್ತು ಯುಡಾ ಈಗ ಪರಿಶೀಲನೆಗೆ ಮುಂದಾಗಿದ್ದು, ಕಬಳಿಸಿದವರು ತಕ್ಷಣ ಜಾಗ ಖಾಲಿ ಮಾಡಬೇಕು. ಇಲ್ಲವಾದರೆ ಹಂತ-ಹಂತವಾಗಿ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

— > ಉಮೇಶ ಚವ್ಹಾಣ್​ ಪೌರಾಯುಕ್ತ, ನಗರಸಭೆ ಯಾದಗಿರಿ
"

ಜನರಿಗೆ ಸರ್ಕಾರದಿಂದ ನೀಡುವ ಅಗತ್ಯ ಮೂಲಸೌಕರ್ಯಗಳಲ್ಲಿ ಪುಟ್​ಪಾತ್​ ರಸ್ತೆಯೂ ಒಂದು. ಆದರೆ ನಗರದಲ್ಲಿದ್ದ ಅನೇಕ ಪುಟ್​ಪಾತ್​ ರಸ್ತೆಗಳು ಮಾಯವಾಗಿದ್ದು, ಪತ್ತೆ ಹಚ್ಚಿ ತೆರವುಗೊಳಿಸಲಾಗುವುದು.

— > ಬಾಬುರಾವ ಕಾಡ್ಲೂರ ಅಧ್ಯಕ್ಷ, ಯುಡಾ ಯಾದಗಿರಿ