ಕೆಂಭಾವಿ ಪುರಸಭೆ ವ್ಯಾಪ್ತಿಯ ಪರಸನಹಳ್ಳಿ ಗ್ರಾಮದ ವರಹಳ್ಳೀರಾಯನ ಜಾತ್ರಾ ನಿಮಿತ್ತ ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು.
ಕೆಂಭಾವಿ:ಪಟ್ಟಣದ ಪುರಸಭೆ ವ್ಯಾಪ್ತಿಯ ಪರಸನಹಳ್ಳಿ ಗ್ರಾಮದ ಐತಿಹಾಸಿಕ ವರಹಳ್ಳೀರಾಯನ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಅಪಾರ ಭಕ್ತರ ಮಧ್ಯೆ ಜೈೂಷಗಳೊಂದಿಗೆ ರಥೋತ್ಸವ ನಡೆಯಿತು.
ಜಾತ್ರೆ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಅರ್ಚಕ ಗುತ್ತಣ್ಣ ಪೂಜಾರಿ ನೇತೃತ್ವದಲ್ಲಿ ಪೂಜೆ, ಅಭಿಷೇಕ, ನೈವೇದ್ಯ, ವೇದೂಷ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ 6ಕ್ಕೆ ಪಲ್ಲಕ್ಕಿಯಲ್ಲಿ ವರಹಳ್ಳೀರಾಯ, ಎರಡು ಚೌಕಿ ಮಂಟಪದಲ್ಲಿ ರಾಯಮಾನ್ಯ ಹಾಗೂ ಜಟ್ಟಿಂಗರಾಯನ ಉತ್ಸವ ಮೂರ್ತಿಗಳ ಮೆರವಣಿಗೆ ನಂತರ ಸಿಂಗಾರಗೊಂಡ ರಥದಲ್ಲಿ ಹಳ್ಳೀರಾಯನ ಉತ್ಸವ ಮೂರ್ತಿ ಏರುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಸಮೀಪದ ಹಳ್ಳದ ದಂಡೆಯ ಬಳಿ ಇರುವ ಪಾದಗಟ್ಟೆಯವರೆಗೆ ರಥೋತ್ಸವ ಸಾಗಿ ನಂತರ ಪಾದಗಟ್ಟೆಯಲ್ಲಿ ಪೂಜೆ ನಂತರ ಮತ್ತೆ ರಥ ಮರಳಿ ತನ್ನ ಸ್ಥಾನಕ್ಕೆ ಬಂದ ಮೇಲೆ ಭಕ್ತರು ತೇರಿಗೆ ಹಿಡಿಗಾಯಿ ಒಡೆದು ತಮ್ಮ ಹರಕೆ ತೀರಿಸಿದರು. ರಥೋತ್ಸವದ ವೇಳೆ ಶ್ರೀ ವರಹಳ್ಳೀರಾಯ ಜೈೂಷಗಳು ಮುಗಿಲು ಮುಟ್ಟಿದವು. ರಥದ ಹಿಂದೆ ನೂರಾರು ಸುಮಂಗಲಿರು ಕಳಸ ಹೊತ್ತು ಪಾದಗಟ್ಟೆಯವರೆಗೆ ರಥದ ಜತೆ ಹೆಜ್ಜೆ ಹಾಕಿದರು.
ಬೇವುಬೆಲ್ಲ ವಿತರಣೆ: ಎಲ್ಲೆಡೆ ಯುಗಾದಿ ಹಬ್ಬದಂದು ಜನತೆ ಬೇವು ಬೆಲ್ಲ ಸವಿದರೆ ಈ ಗ್ರಾಮದಲ್ಲಿ ಯುಗಾದಿ ಮತ್ತು ಈ ರಥೋತ್ಸವ ಸಂಭ್ರಮದಲ್ಲಿಯೂ ಗ್ರಾಮದ ಎಲ್ಲ ಮನೆಗಳಲ್ಲಿ ಬೇವುಬೆಲ್ಲ ನೈವೇದ್ಯ ಮಾಡಿ ಜನತೆಗೆ ನೀಡುವ ಸಂಪ್ರದಾಯ ಇದೆ ಎನ್ನುತ್ತಾರೆ ಗ್ರಾಮದ ಹಳ್ಳೆಪ್ಪಗೌಡ ಪೊಲೀಸ್ ಪಾಟೀಲ್. ಈ ದೇವಸ್ಥಾನ ಹಲವು ವರ್ಷಗಳ ಇತಿಹಾಸ ಹೊಂದಿದ್ದು ಪ್ರತಿವರ್ಷ ನಡೆಯುವ ಈ ಜಾತ್ರೆಗೆ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆ ತೀರುವ ವಾಡಿಕೆ ಇದೆ ಎನ್ನುತ್ತಾರೆ ಇತಿಹಾಸ ಸಂಶೋಧಕ ನಿಂಗನಗೌಡ ದೇಸಾಯಿ.