The Central Government should rush to the aid of farmers. 
ರಾಜ್ಯ

ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಲಿ

ಕೋಲಾರ: ರೈತರು ಉತ್ಪಾದಿಸುತ್ತಿರುವ ಹಣ್ಣು, ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ದೊರೆಯದೆ ಕಂಗಾಲಾಗಿದ್ದಾರೆ. ಮಳೆ ಕೊರತೆ ಎದುರಾಗಿ ಬರ ಪರಿಸ್ಥಿತಿ ಎದುರಾಗುವ ಮುನ್ಸೂಚನೆಯಿದ್ದು, ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.
ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಬುಧವಾರ ಭೇಟಿ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಲಾಂತರ ರೈತರು ಮಾವು ಮತ್ತು ಟೊಮ್ಯಾಟೊ ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದ ಕಾರಣ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾವಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಘೋಷಿಸಲು ನೀವು ಕೈಗೊಂಡಿರುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಿ, 1.25 ಲಕ್ಷ ಮೆಟ್ರಿಕ್​ ಟನ್​ ಮಿತಿಯನ್ನು ಇನ್ನು ಹೆಚ್ಚಿಸಬೇಕು. ಜತೆಗೆ ಟೊಮ್ಯಾಟೊ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕ್ರಮವಹಿಸಬೇಕು ಎಂದು ಕೋರಿದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಳುಮೆ ಹಾಗೂ ಬಿತ್ತನೆ ಕಾರ್ಯಗಳು ಕುಂಠಿತಗೊಂಡಿದೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಿದೆ. ಗೋಶಾಲೆಗಳ ನಿರ್ವಹಣೆಯಲ್ಲಿಯೂ ಸಮಸ್ಯೆಗಳು ಎದುರಾಗಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ, ಕೇಂದ್ರ ಸರ್ಕಾರದ ಮಧ್ಯ ಪ್ರವೇಶಿಸಬೇಕು ಎಂದರು.