ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ಬೆಂಗಳೂರು: ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಶೇ.75 ಗಿಂತ ಹೆಚ್ಚು ಅಸಂಘಟಿತ ಕಾರ್ಮಿಕರು ಇದ್ದಾರೆ. ಕೇಂದ್ರ ಸರ್ಕಾರ ಅವರ ವಿರೋಧಿಯಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದರು.
ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಆದರೂ ಅದಕ್ಕೆ ಸಮಾನ ಗೌರವ ನೀಡಬೇಕು. ಕಾರ್ಮಿಕರು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಗತ್ಯ. ಅವರ ಕಾಯಕಕ್ಕೆ ಸಮಾನ ಗೌರವ ಲಭಿಸಬೇಕು ಎಂದರು.
ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿಯಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ. ಅವರನ್ನು ಗೌರವಿಸುತ್ತದೆ. ಕಾರ್ಮಿಕರು ಕೆಲಸದ ವೇಳೆ ಮೃತಪಟ್ಟರೆ ಅವರಿಗೆ ನೀಡುತ್ತಿದ್ದ 5 ಲಕ್ಷ ರೂ. ಪರಿಹಾರವನ್ನು 8 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಸಹಜ ಮರಣ ಹೊಂದಿದವರ ಸಂಸ್ಕಾರಕ್ಕೆ ನೀಡುತ್ತಿದ್ದ 75 ಸಾವಿರ ರೂ.ಅನ್ನು 1.50 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಸಂತೋಷ ಲಾಡ್ ಮತ್ತು ಪ್ರಿಯಾಂಕಾ ಖರ್ಗೆ ಹಾಗೂ ನನ್ನೊಂದಿಗೆ ಚರ್ಚಿಸಿ ಕಾರ್ಮಿಕರಿಗೆ ನೆರವಾಗುವ ಕೆಲಸವನ್ನು ಮಾಡಿದ್ದಾರೆ.
ಗಿಗ್ ಕಾರ್ಮಿಕರ ವಿಮಾ ಯೋಜನೆಗೆ 30,256 ಮಂದಿ ನೋಂದಾಯಿಸಲಾಗಿದ್ದು, ಅಪಘಾತದಲ್ಲಿ ಮರಣ ಹೊಂದಿವವರಿಗೆ 4 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಿದೆ. ಈಗಾಗಲೇ ಐದು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
2026-27ಕ್ಕೆ ಶ್ರಮಿಕ ವರ್ಗಗಳ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಕಾರ್ಮಿಕರ ಮಕ್ಕಳಿಗೆ 104 ವಸತಿ ಶಾಲೆಗಳನ್ನು ತೆರೆಯಲಾಗಿದೆ. ವಸತಿ ಶಾಲೆಗಳಲ್ಲಿ ಶೇ.99.42 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾರ್ಮಿಕರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಲು ಈ ಶಾಲೆಗಳು ನೆರವಾಗಲಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಜಾರಿಗೆ ತಂಡ ಕಾನೂನುಗಳು ಕಾರ್ಮಿಕರ ಹಿತವನ್ನು ಕಾದಿವೆ ಹಾಗೂ ಜಗಜೀವನ ರಾಮ್ ಕಾರ್ಮಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಕಾಂಗ್ರೆಸ್ ಕಾರ್ಮಿಕರ ಜತೆಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಜಿ. ಸಿ. ಚಂದ್ರಶೇಖರ್ ಹಲವರು ಉಪಸ್ಥಿತರಿದ್ದರು.