ಶಾಸಕ ವಿ. ಸುನೀಲ್ ಕುಮಾರ್ ಸುದ್ದಿಗೋಷ್ಠಿ
ಬೆಂಗಳೂರು: ಆಗಸ್ಟ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಮಂಡಿಸಬೇಕು ಎಂದು ಶಾಸಕ ವಿ. ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಮಾತನಾಡಿ, ಜನರ ತೆರಿಗೆಯ 450 ಕೋಟಿ ರೂ.ಗಳನ್ನು ವೆಚ್ಚ ಮಾಡಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ವರದಿ ಪಡೆದಿದೆ. ಅದನ್ನು ಕಸದಬುಟ್ಟಿಗೆ ಎಸೆಯುವ ಬದಲು, ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಿ, ಚರ್ಚೆಗೆ ಸಮಯ ನಿಗದಿ ಮಾಡಬೇಕು. ಏಕೆಂದರೆ, ರಾಜ್ಯದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗೂ ಇದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುತ್ತದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಜಾತಿ ಗಣತಿ ಬೇಡ ಎಂದು ವಿರೋಧ ಮಾಡಿದಾಗ ಅಂದಿನ ಸಿಎಂ ಸಿದ್ದರಾಮಯ್ಯ, ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಸಮರ್ಥನೆ ಮಾಡಿಕೊಂಡರು. ಕೇವಲ 2 ತಿಂಗಳಲ್ಲಿ ಗಣತಿ ನಡೆಯಲಿದೆ ಎಂದು ಹೇಳಿದ್ದರು.
ಮೇ 27ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟ ಮಾರನೇ ದಿನವೇ ವರದಿಯನ್ನು ಸಿದ್ದರಾಮಯ್ಯ ಸ್ವೀಕರಿಸಿದರು. ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಕೂಡ ವರದಿ ಮಂಡನೆ ಮಾಡಲು ಇಚ್ಛಾಶಕ್ತಿ ತೋರಿಸುತ್ತಿಲ್ಲ. ಜನರ ತೆರಿಗೆ ಹಣದಲ್ಲಿ ನಡೆಸಿರುವ ಸಮೀಕ್ಷೆಯನ್ನು ಕಸದಬುಟ್ಟಿಗೆ ಎಸೆಯುವ ಬದಲು ಮಂಡನೆ ಮಾಡಬೇಕು ಎಂದರು.
ಸಂಸದ ಪಿ.ಸಿ. ಮೋಹನ್, ಶಾಸಕ ಬಿ.ಎ. ಬಸವರಾಜ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಒಬಿಸಿ ಖಜಾಂಚಿ ಎ.ಎಚ್.ಬಸವರಾಜು ಇದ್ದರು.