ಸೇಡಂ ತಾಲೂಕಿನ ರಂಜೋಳದ ಶ್ರೀ ವೀರಾಂಜನೇಯ ದೇವಾಲಯ ಆವರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯುತ್ತಿರುವುದು.
- ರಂಜೋಳದಲ್ಲಿ ದೇವಸ್ಥಾನ ಉದ್ಘಾಟನೆ ವಿಷಯದಲ್ಲಿ ವಾಗ್ವಾದ
- ಭಜನೆ ಮಾಡುತ್ತಿದ್ದ ಬಿಜೆಪಿಯವರನ್ನು ಹೊರಹಾಕಿದ ಕಾಂಗ್ರೆಸ್
ಸೇಡಂ: ದೇವಸ್ಥಾನ ಲೋಕಾರ್ಪಣೆ ಸಮಾರಂಭದ ಆಹ್ವಾನ ಪತ್ರಿಕೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ರಂಜೋಳ ಗ್ರಾಮದಲ್ಲಿ ಗುರುವಾರ ವಾಕ್ಸಮರ ನಡೆದಿದೆ.
ರಂಜೋಳದಲ್ಲಿ ಶನಿವಾರ (ಆ.22) ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಉದ್ಘಾಟನೆ ಹಾಗೂ ಒಂಬತ್ತು ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಕೇವಲ ಕಾಂಗ್ರೆಸ್ ನಾಯಕರ ಹೆಸರು ಹಾಕಲಾಗಿದೆ. ಉದ್ದೇಶಪೂರ್ವಕವಾಗಿಯೇ ಸ್ಥಳಿಯ ಮುಖಂಡರು ಹಾಗೂ ತಾಲೂಕಿನ ನಾಯಕರ ಹೆಸರು ಕೈಬಿಡಲಾಗಿದೆ. ಇದೊಂದು ಕಾಂಗ್ರೆಸ್ ಕಾರ್ಯಕ್ರಮವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ದೇವಾಲಯದೊಳಗೆ ಆಗಮಿಸಿ ರಾಮ ಭಜನೆ ಆರಂಭಿಸಿದರು. ಇದರಿಂದ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮದ ಮುಖಂಡರು ದೇವಾಲಯದಿಂದ ಹೊರ ಹೋಗಿ ಭಜನೆ ಮಾಡಿ ಎಂದು ಕೂಗಿದರು.
ಇದೇ ವೇಳೆ ಎರಡೂ ಪಕ್ಷದವರ ಮಧ್ಯೆ ವಾಗ್ವಾದ ಉಂಟಾಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸೂಕ್ಷ್ಮತೆ ಅರಿತ ಪೊಲೀಸರು ಎರಡು ಕಡೆಯವರ ಮನವೊಲಿಕೆಗೆ ಪ್ರಯತ್ನಿಸಿದರು. ಇಷ್ಟಾದರೂ ಕೇಳದ ಕಾಂಗ್ರೆಸಿಗರು, ಬಿಜೆಪಿಗರು ಹೊರಗೆ ಬಾರದಿದ್ದರೆ ನಾವೇ ಹೊರಹಾಕುತ್ತೇವೆ ಎಂದು ದೇಗುಲ ನುಗ್ಗಲು ಹೋದರು. ಬಳಿಕ ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ದಿಡ್ಡಿಮನಿ, ಪಿಐ ಸಂಜೀವಕುಮಾರ ಕುಂಬಾರಗೇರಿ, ಪಿಎಸ್ಐ ಉಪೇಂದ್ರಕುಮಾರ ಹಾಗೂ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿ ಬಿಜೆಪಿ ಕಾರ್ಯಕರ್ತರನ್ನು ದೇವಾಲಯದಿಂದ ಹೊರಗಡೆ ಕರೆದುಕೊಂಡು ಬಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಕೀಳುಮಟ್ಟದ ರಾಜಕೀಯ
ಸಾರ್ವಜನಿಕರ ಸ್ವತ್ತಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿರುವುದನ್ನು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಖಂಡಿಸಿದರು. ಈ ಹಿಂದೆ ನಾನು ಶಾಸಕನಾಗಿದ್ದಾಗ ಸುಮಾರು 30 ಕೋಟಿ ರೂ. ಅನುದಾನ ದೇಗುಲಗಳ ನಿರ್ಮಾಣಕ್ಕೆ ನೀಡಿದ್ದಲ್ಲದೆ 100ಕ್ಕೂ ಅಧಿಕ ದೇವಾಲಯಗಳ ಜೀಣೋರ್ದ್ಧಾರ ಮಾಡಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳ ವಿಚಾರದಲ್ಲಿ ಯಾವತ್ತೂ ಕೀಳುಮಟ್ಟದ ರಾಜಕೀಯ ಮಾಡಿಲ್ಲ. ಎಲ್ಲರನ್ನು ಆಹ್ವಾನಿಸಿ ಒಗ್ಗೂಡಿಸುವ ಕೆಲಸ ಮಾಡಿದ್ದೇನೆ. ಆದರೆ ಇಂದು ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಸ್ವತಃ ದೇವಾಲಯದ ಟ್ರಸ್ಟ್ ಅಧ್ಯಕ್ಷರು, ಗ್ರಾಮದ ಅನೇಕ ಹಿರಿಯರನ್ನು ಉದ್ಘಾಟನೆಗೆ ಆಹ್ವಾನಿಸಿಲ್ಲ. ಈ ಭಾಗದ ಪ್ರಭಾವಿ ನಾಯಕರು, ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಹೆಸರು ಕೈಬಿಡಲಾಗಿದೆ. ಉರಿಲಿಂಗ ಪೆದ್ದೀಶ್ವರ ಮಠದ ಸ್ವಾಮೀಜಿಯವರನ್ನು ಆಹ್ವಾನಿಸಿಲ್ಲ ಎಂದು ದೂರಿದರು. ಬಿಜೆಪಿ ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪ್ರಮುಖರಾದ ಶಿವಕುಮಾರ ಪಾಟೀಲ್ ತೆಲ್ಕೂರ, ತಿರುಪತಿ ಶಹಾಬಾದಕರ್, ರಾವೇಂದ್ರ ಮೆಕಾನಿಕ್, ನಾಗಪ್ಪ ಕೊಳ್ಳಿ, ಸಿದ್ದು ಬಾನರ್, ಶಿವಕುಮಾರ ತೊಟ್ನಳ್ಳಿ, ವೆಂಕಟೇಶ ಪಾಟೀಲ್, ಸೂಗಪ್ಪ ರಂಜೋಳ, ಸಂತೋಷ ರಂಜೋಳ, ಮಹಾವೀರ ಅಳ್ಳೊಳ್ಳಿ, ವಿನೋದ ಸಾಹುಕಾರ, ರಾಮು ಕಣೇಕಲ್, ನಾಗರೆಡ್ಡಿ ಪಾಟೀಲ್, ಮಹಾದೇವ ಗೋಣಿ, ರಾಮು ನಾಯಕ್, ನಾಗು ದೋರೆ, ಶಿವಾನಂದ ಸ್ವಾಮಿ, ರವಿ ನಾಯಕ್, ಅನಿಲ ಊಡಗಿ, ಮಲ್ಲಿಕಾರ್ಜುನ ಭೂತಪುರ, ಗೋವಿಂದ ಯಾಕಂಬ್ರಿ, ಗುರು ತಳಕಿನ್, ಶ್ರೀಮಂತ ಅವಂಟಿ, ಹಣಮಂತ ಭರತನೂರ, ನಾಗು ಸಾಹುಕಾರ ಕೋಡ್ಲಾ, ವಿಜಯಕುಮಾರ ಖೇವಜಿ, ಸಂತೋಷ ಬಟಗೇರಾ, ವಿಷ್ಣು ಊಡಗಿ, ಜಯಪ್ರಕಾಶ ರಾಠೋಡ್, ಸಿದ್ದು ಊಡಗಿ ಇತರರಿದ್ದರು.
ದೇಗುಲ ನಿರ್ಮಾಣಕ್ಕಾಗಿ ರಂಜೋಳ ಗ್ರಾಮದ ಪ್ರತಿಯೊಬ್ಬರಿಂದ ದೇಣಿಗೆ ಪಡೆಯಲಾಗಿದೆ. ಇದಲ್ಲದೆ ಕಲಬುರಗಿ, ಯಾದಗಿರಿ, ರಾಯಚೂರು ಸೇರಿ ವಿವಿಧೆಡೆ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಯಾವುದೇ ಲೆಕ್ಕಪತ್ರವಿಲ್ಲ, ರಸೀದಿಯೂ ಇಲ್ಲ. ದೇಣಿಗೆ ಹಣ ಲೂಟಿ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ದಲಿತರು ಎಂಬ ಕಾರಣಕ್ಕೆ ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಆಹ್ವಾನಿಸಿಲ್ಲ ಎಂದು ತೆಲ್ಕೂರ ಕಿಡಿಕಾರಿದರು.
ದೇವಾಲಯ ನಿರ್ಮಾಣದಲ್ಲಿ ಬಿಜೆಪಿಗರ ಸಹಕಾರ ಶೂನ್ಯವಾಗಿದೆ. ಹೀಗಿದ್ದಾಗ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಯಾಕೆ ಹಾಕಬೇಕು? ಕೇವಲ ರಾಜಕೀಯ ಮಾಡುವುದು ಅವರ ಗುಣಧರ್ಮ. ಧಾರ್ಮಿಕ ಕಾರ್ಯಕ್ರಮ ಹಾಳು ಮಾಡುವ ಉದ್ದೇಶ ಅವರದು. ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡಿದವರ ಹೆಸರು ಆಮಂತ್ರಣ ಪತ್ರದಲ್ಲಿ ಹಾಕಿದ್ದೇವೆ.
— > ಸತೀಶರೆಡ್ಡಿ ರಂಜೋಳ ಕಾಂಗ್ರೆಸ್ ನಾಯಕ