ಆನೇಕಲ್​ ಪಟ್ಟಣದಲ್ಲಿ ಗುಂಪು ಗುಂಪಾಗಿ ಸೇರಿರುವ ಬೀದಿನಾಯಿಗಳು. 
ರಾಜ್ಯ

ಶ್ವಾನಗಳ ಉಪಟಳ ಜನರಲ್ಲಿ ತಳಮಳ / ANEKAL

ಆನೇಕಲ್​ : ತಾಲೂಕಿನ ಚಂದಾಪುರ ಸಮೀಪದ ಸೂರ್ಯನಗರ ಬಡಾವಣೆಯಲ್ಲಿ ಬೀದಿನಾಯಿಗಳ ಉಪಟಳ ಮಿತಿಮೀರಿದ್ದು, ಸ್ಥಳಿಯರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಡಾವಣೆಯಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಕೆಲ ದಿನಗಳಿಂದ ಬೀದಿನಾಯಿಗಳ ಕಾಟ ಮಿತಿಮೀರಿದೆ. ಗುಂಪು ಗುಂಪಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ನಾಯಿಗಳು ಮಕ್ಕಳು, ಮಹಿಳೆಯರು, ಪಾದಚಾರಿಗಳು ಹಾಗೂ ಬೈಕ್​ ಸವಾರರ ಮೇಲೆ ದಾಳಿ ನಡೆಸುತ್ತಿದ್ದು, ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ರಸ್ತೆಯಲ್ಲಿ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಈ ಕುರಿತು ಚಂದಾಪುರ ಪುರಸಭೆ ಅಧಿಕಾರಿಗಳು, ಸೂರ್ಯನಗರ ಪೊಲೀಸ್​ ಠಾಣೆ ಹಾಗೂ ಸ್ಥಳಿಯ ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಒತ್ತಾಯ: ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಮನವಿ ಮಾಡಿದಾಗ, ಕೆಲವು ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯನಗರ ಬಡಾವಣೆ ಬೀದಿನಾಯಿಗಳ ಅಡ್ಡೆಯಾಗಿ ಮಾರ್ಪಟ್ಟಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಿತ ಅಧಿಕಾರಿಗಳು ಶ್ರೀ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಹೊಸೂರು ಬಾಗಿಲು ರಸ್ತೆಯಲ್ಲಿ ಒಂದೇ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ನಾಯಿಗಳಿದ್ದು, ಮಕ್ಕಳು ಹಾಗೂ ಜನ ಓಡಾಡಲು ಭಯಪಡುವ ಪರಿಸ್ಥಿತಿ ನಿಮಾರ್ಣವಾಗಿದೆ.

ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಕೆಲವು ಸಂಘಟನೆಗಳ ವಿರೋಧ ಇರುವುದರಿಂದ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪುರಸಭೆ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.