ರಾಜಧಾನಿಯ ಕೆಲವೆಡೆ ಸೋಮವಾರ ಸಾಧಾರಣ ಮಳೆ
ಬೆಂಗಳೂರು: ರಾಜಧಾನಿಯ ಕೆಲವೆಡೆ ಸೋಮವಾರ ಸಾಧಾರಣ ಮಳೆಯಾಯಿತು. ನಾಯಂಡಹಳ್ಳಿಯಲ್ಲಿ 10 ಮಿಮೀ ವರ್ಷಧಾರೆಯಾಗಿತ್ತು.
ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಚಾಮರಾಜಪೇಟೆ, ಶಾಂತಿನಗರ, ಜಯನಗರ, ಜೆ.ಪಿ.ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಅರಮನೆ ರಸ್ತೆ, ಬಸವನಗುಡಿ, ಆರ್.ಟಿ. ನಗರದ, ಸದಾಶಿವನಗರ, ವಿಜಯನಗರ, ಲಗ್ಗೆರೆ, ಸುಬ್ರಹ್ಮಣ್ಯನಗರ, ನಾಗರಬಾವಿ ಮತ್ತು ಮೂಡಲಪಾಳ್ಯ ಸೇರಿ ನಗರದ ಇತರ ಭಾಗಗಳಲ್ಲಿ ಮಳೆಯಾಯಿತು. ಈ ವೇಳೆ ಬಸ್ ನಿಲ್ದಾಣಗಳು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂತು.
ಕೆಲ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ಸವಾರರು ವಾಹನ ಚಲಾಯಿಸಲು ಪರದಾಡಿದರು. ಕೆಲ ಅಂಡರ್‌ಪಾಸ್, ಜಂಕ್ಷನ್‌ಗಳಲ್ಲಿ ನೀರು ತುಂಬಿತ್ತು. ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದವರು ಮಳೆಗೆ ಸಿಲುಕಿದ್ದರು. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಮ್ಯಾನ್‌ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆ ಮೇಲೆ ಕೊಳಚೆ ನೀರು ಹರಿದಿತ್ತು.
ಸಿಲಿಕಾನ್ ಸಿಟಿಯಲ್ಲಿ ಜೂ 1ರಿಂದ ಜೂ 29ವರೆಗೆ 70 ಮಿಮೀ ಮಳೆಯಾಗಬೇಕಿತ್ತು. ಆದರೆ, 83 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.18 ಅಧಿಕವಾಗಿ ಮಳೆಯಾಗಿದೆ.
ರಾಜಧಾನಿಯಲ್ಲಿ ಜೂ 30ರಿಂದ ಜು.6ವರೆಗೆ ಸಾಧಾರಣ ಮಳೆಯಾಗುವ ಸಾದ್ಯತೆ ಇದೆ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಂಜೆ ವೇಳೆಗೆ ಮಳೆ ಬೀಳಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 21 ಡಿ.ಸೆ. ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.