The backbone of India's future energy security
ಬೆಂಗಳೂರು/ಮಂಗಳೂರು: ದಶಕಗಳಿಂದಲೂ ಜಾಗತಿಕ ರಾಜಕೀಯ ಹಾಗೂ ಇಂಧನ ಮಾರುಕಟ್ಟೆಯ ಕೇಂದ್ರ ಬಿಂದುವಾಗಿರುವ ಮಧ್ಯಪ್ರಾಚ್ಯ, ವಿವಿಧ ಕಾರಣಗಳಿಂದ ಪದೇಪದೆ ಯುದ್ಧಪೀಡಿತವಾಗುತ್ತಿದೆ. ಅಲ್ಲಿ ನಡೆಯುತ್ತಿರುವ ಯುದ್ಧ, ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಸಾಗರ ಮಾರ್ಗಗಳಲ್ಲಿ ಉಂಟಾಗುತ್ತಿರುವ ಅಶಾಂತಿ... ಇವೆಲ್ಲವೂ ಜಾಗತಿಕ ತೈಲ ಸರಬರಾಜಿನ ಸ್ಥಿರತೆಗೆ ದೊಡ್ಡ ಸವಾಲಾಗಿವೆ.
ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ಇಂಧನ ಅಗತ್ಯಕ್ಕಾಗಿ ಈ ಪ್ರದೇಶದ ಮೇಲೆಯೇ ಅವಲಂಬಿತವಾಗಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಭಾರತ ತನ್ನ ಒಟ್ಟು ತೈಲ ಬಳಕೆಯ ಸುಮಾರು ಶೇ. 85ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಕೊಲ್ಲಿ ಪ್ರದೇಶದ ಸುದೀರ್ಘ ಅಸ್ಥಿರತೆ ದೇಶದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನ ಭದ್ರತೆ ಬಲಪಡಿಸುವ ಉದ್ದೇಶದಿಂದ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುವ ಕಾರ್ಯತಂತ್ರ ಮಾಡಿದೆ.
ಇದರ ಭಾಗವಾಗಿ ಭಾರತದಲ್ಲಿ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಎಂಬ ಮಹತ್ವದ ಯೋಜನೆ ರೂಪಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದೇಶದ ಅವಶ್ಯಕತೆಗಳನ್ನು ಪೂರೈಸಲು ಇಂಧನವನ್ನು ಭೂಗರ್ಭದಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದು. ಯುದ್ಧ, ಜಾಗತಿಕ ಸಂಕಷ್ಟ, ಸಮುದ್ರ ಮಾರ್ಗಗಳ ಬಂದ್ ಅಥವಾ ತೈಲ ಸರಬರಾಜಿನ ವ್ಯತ್ಯಯ ಉಂಟಾದಾಗ ಈ ಸಂಗ್ರಹಿತ ಇಂಧನ ದೇಶಕ್ಕೆ ಜೀವನಾಡಿಯಾಗುತ್ತದೆ.
ಆರ್ಥಿಕ ಭದ್ರತೆ, ಇಂಧನ ಸ್ವಾವಲಂಬನೆಯತ್ತ ಹೆಜ್ಜೆ
ಇಂದಿನ ಜಾಗತಿಕ ರಾಜಕೀಯ ಪರಿಸ್ಥಿತಿ ಗಮನಿಸಿದರೆ ಇಂಧನ ಭದ್ರತೆ ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಅತ್ಯಂತ ಪ್ರಮುಖ. ಕೊಲ್ಲಿ ಪ್ರದೇಶದಲ್ಲಿ ಉಂಟಾಗುವ ಯಾವುದೇ ಅಸ್ಥಿರತೆ ಜಾಗತಿಕ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಭಾರತ ಮುಂಚಿತವಾಗಿ ಇಂಧನ ಸಂಗ್ರಹಣೆ ಮಾಡುವ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧವಾಗುತ್ತಿದೆ. ಪಾದೂರಿನಂತಹ ತೈಲ ಸಂಗ್ರಹ ಯೋಜನೆಗಳು ಕೇವಲ ಮೂಲಸೌಕರ್ಯ ಅಭಿವೃದ್ಧಿಯಲ್ಲ, ಅವು ದೇಶದ ಆರ್ಥಿಕ ಭದ್ರತೆ ಮತ್ತು ಇಂಧನ ಸ್ವಾವಲಂಬನೆಯತ್ತ ಸಾಗುತ್ತಿರುವ ಮಹತ್ವದ ಹೆಜ್ಜೆಗಳಾಗಿವೆ. ಭವಿಷ್ಯದ ಸಂಕಷ್ಟದ ಸಂದರ್ಭಗಳಲ್ಲಿ ಈ ಯೋಜನೆಗಳು ಭಾರತಕ್ಕೆ ಬಲವಾದ ರಕ್ಷಣಾ ಕವಚವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ.
ಈಗಾಗಲೇ ಆಂಧ್ರಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಮಂಗಳೂರು ಮತ್ತು ಉಡುಪಿಯ ಪಾದೂರು ಪ್ರದೇಶಗಳಲ್ಲಿ ಭೂಗರ್ಭದ ಕಲ್ಲಿನ ಗುಹೆಗಳಲ್ಲಿ ತೈಲ ಸಂಗ್ರಹ ಕೇಂದ್ರಗಳನ್ನು ನಿರ್ವಿುಸಲಾಗಿದೆ. ಈ ಕೇಂದ್ರಗಳು ಒಟ್ಟಾಗಿ ಲಕ್ಷಾಂತರ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ತುರ್ತು ಸಂದರ್ಭದಲ್ಲಿ ದೇಶದ ಕೆಲವು ದಿನಗಳ ಇಂಧನ ಅವಶ್ಯಕತೆಯನ್ನು ಪೂರೈಸಲು ಸಹಕಾರಿಯಾಗುತ್ತವೆ.
ಭೂಗರ್ಭ ಸಂಗ್ರಹ ವ್ಯವಸ್ಥೆ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಾದೂರು ಪ್ರದೇಶ ಈ ಯೋಜನೆಗೆ ಅತ್ಯಂತ ಪ್ರಶಸ್ತವಾಗಿದ್ದು, ಇಲ್ಲಿ ಭೂಗರ್ಭದ ಕಲ್ಲಿನ ಗುಹೆಗಳಲ್ಲಿ ತೈಲ ಸಂಗ್ರಹ ಘಟಕ ಭಾರತದ ಇಂಧನ ಭದ್ರತೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಲಿದೆ. ಈ ಪ್ರದೇಶ ಸಮುದ್ರದ ಸಮೀಪವಿರುವುದರಿಂದ ಕಚ್ಚಾ ತೈಲವನ್ನು ಹಡಗುಗಳ ಮೂಲಕ ಸುಲಭವಾಗಿ ತರಲು ಮತ್ತು ಪೈಪ್ಲೈನ್ಗಳ ಮೂಲಕ ಸಂಗ್ರಹಣಾ ಘಟಕಕ್ಕೆ ಸಾಗಿಸಲು ಅನುಕೂಲಕರ. ಇಲ್ಲಿ ನಿರ್ವಿುಸಿರುವ ಮೊದಲ ಹಂತದ ಭೂಗರ್ಭ ಸಂಗ್ರಹ ವ್ಯವಸ್ಥೆ ಲಕ್ಷಾಂತರ ಟನ್ ಕಚ್ಚಾ ತೈಲ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕೇಂದ್ರ ಸರ್ಕಾರ ಈ ಯೋಜನೆಯ 2ನೇ ಹಂತವನ್ನು ಕೈಗೆತ್ತಿಕೊಂಡಿದ್ದು, ಸಂಗ್ರಹ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ.
ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಆರ್ಥಿಕ ದೃಷ್ಟಿಯಿಂದಲೂ ಈ ಯೋಜನೆಗಳು ಮಹತ್ವದ್ದಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾದಾಗ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿ ಮಾಡಿ ಸಂಗ್ರಹಿಸುವ ಮೂಲಕ ಭವಿಷ್ಯದಲ್ಲಿ ಬೆಲೆ ಏರಿಕೆಯಾದಾಗ ಉಂಟಾಗುವ ಹೊರೆ ಕಡಿಮೆ ಮಾಡಬಹುದು. ಇದು ಆರ್ಥಿಕ ಸ್ಥಿರತೆಗೆ ಸಹಕಾರಿಯಾಗುತ್ತದೆ. ಇನ್ನು ಭೂಗರ್ಭದ ಕಲ್ಲಿನ ಗುಹೆಗಳಲ್ಲಿ ಸಂಗ್ರಹಿಸುವ ವ್ಯವಸ್ಥೆ ಸುರಕ್ಷಿತವಾಗಿದ್ದು, ಪ್ರಕೃತಿ ವಿಪತ್ತುಗಳು ಅಥವಾ ಶತ್ರು ದಾಳಿಗಳಿಂದಲೂ ಹೆಚ್ಚಿನ ರಕ್ಷಣೆ ನೀಡುತ್ತದೆ.
ಕಚ್ಚಾ ತೈಲ ಸಂಗ್ರಹಾಗಾರಕ್ಕೆ ಮುನ್ನುಡಿ: ಪಾದೂರು ಪ್ರದೇಶ ಈಗಾಗಲೇ ಪ್ರಥಮ ಹಂತದಡಿ ಸ್ಥಾಪಿತವಾದ ತಂತ್ರಜ್ಞಾನದ ಸಂಗ್ರಹ ಕೇಂದ್ರವಾಗಿದೆ. 2ನೇ ಹಂತದ ಮೂಲಕ ದೇಶದ ತೈಲ ಸಂಗ್ರಹ ಹೆಚ್ಚಿಸುವ ಉದ್ದೇಶ ಹೊಂದಿದೆ. ಇದು ರಾಷ್ಟ್ರದ ಹಿತಾಸಕ್ತಿಗಾಗಿ ಕೈಗೊಳ್ಳಲಾಗುತ್ತಿರುವ ಮಹತ್ವದ ಮೂಲಸೌಕರ್ಯ ಯೋಜನೆ. ರಿಫೈನರಿ ಅಥವಾ ತೈಲ ಸಂಸ್ಕರಣಾ ಘಟಕವಲ್ಲ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್ಪಿಆರ್ಎಲ್) ಹಾಗೂ ಆಯಿಲ್ ಇಂಡಸ್ಟ್ರಿ ಡೆವಲಪ್ವೆುಂಟ್ ಬೋರ್ಡ್(ಒಐಡಿಬಿ)ಗೆ ಸೇರಿದ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಈ ಸಂಸ್ಥೆ ಎಂಇಐಎಲ್ ಸ್ಟ್ರಾಟೆಜಿಕ್ ಸ್ಟೋರೆಜ್ ಪ್ರೖೆವೇಟ್ ಲಿಮಿಟೆಡ್ (ಎಂಎಸ್ಎಸ್ಪಿಎಲ್) ಸಂಸ್ಥೆಯೊಂದಿಗೆ ಸಂಯುಕ್ತವಾಗಿ ಈ ತಂತ್ರಜ್ಞಾನದ ಪೆಟ್ರೋಲಿಯಂ ಸಂಗ್ರಹ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಎರಡನೇ ಹಂತದ ಯೋಜನೆ ಭೂಗತ ಗುಹೆಗಳ ಒಳಗೆ ನಿರ್ವಿುಸಲಾಗುವ ಕಚ್ಚಾ ತೈಲ ದ್ರವವಾಗಿದ್ದು, ಇದರ ಒಟ್ಟು ಸಾಮರ್ಥ್ಯ ಪ್ರಸ್ತುತ ದೇಶದಲ್ಲೇ ಅತಿ ಹೆಚ್ಚು ಅಂದರೆ 2.5 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ ಅಂದರೆ 18.3 ದಶಲಕ್ಷ ಬ್ಯಾರಲ್) ಆಗಿರಲಿದೆ. ಈ ಸ್ಥಾವರದಲ್ಲಿ ಎರಡು ಬಗೆಯ ಕಚ್ಚಾ ತೈಲಗಳ ಅಂದರೆ ಹೈ ಸಲ್ಪರ್ ಮತ್ತು ಲೋ ಸಲ್ಪರ್ ಪ್ರತ್ಯೇಕ ಘಟಕಗಳಲ್ಲಿ ಸಂಗ್ರಹಿಸುವಂತೆ ವಿನ್ಯಾಸ ಮಾಡಲಾಗಿದೆ. ಭೂಗತ ವ್ಯವಸ್ಥೆಯಲ್ಲಿ ಸಂಗ್ರಹ ಗುಹೆಗಳು, ಸುರಂಗ ಪ್ರವೇಶ ಮತ್ತು ಗ್ಯಾಲರಿಗಳು, ಇನ್ಲೆಟ್ ಮತ್ತು ಪಂಪ್ ಶಾಫ್ಟ್ಗಳು ಹಾಗೂ ಮೇಲ್ಮೈಯಲ್ಲಿ ಇರುವ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಈ ಸ್ಥಾವರ ಹೊಂದಲಿದೆ.
ಶಿಲಾ ಗುಹೆ ಸಂಗ್ರಹ ವಿಧಾನ: ಈ ಯೋಜನೆಯಲ್ಲಿ ಭೂಗತ ಲೈನಿಂಗ್ ಇಲ್ಲದ ಶಿಲಾ ಗುಹೆ ಸಂಗ್ರಹ ವಿಧಾನ ಬಳಸಲಾಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಂಗ್ರಹಕ್ಕೆ ಬಳಸಲಾಗುವ ಆಧುನಿಕ ಮತ್ತು ವಿಶ್ವಾಸಾರ್ಹ ವಿಧಾನ. ಇಂತಹ ಭೂಗತ ಸಂಗ್ರಹ ವ್ಯವಸ್ಥೆಗಳು ಮೇಲ್ಮೈಯಲ್ಲಿರುವ ಟ್ಯಾಂಕ್ಗಳಿಗಿಂತ ಸುರಕ್ಷಿತ.
ಯೋಜನೆ ವಿನ್ಯಾಸ ವ್ಯಾಪಕವಾದ ಭೂವೈಜ್ಞಾನಿಕ, ಹೈಡ್ರೋ-ಜಿಯಾಲಜಿಕಲ್ ಮತ್ತು ಜಿಯೋಟೆಕ್ನಿಕಲ್ ಅಧ್ಯಯನಗಳ ಆಧಾರದ ಮೇಲೆ ರೂಪುಗೊಂಡಿದೆ. ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯಲ್ಲಿ ಸುರಕ್ಷೆ, ಪರಿಸರ ಸಂರಕ್ಷಣೆ ಮತ್ತು ಅಪಾಯ ಮೌಲ್ಯಮಾಪನ ಕ್ರಮಗಳನ್ನು ಅನುಸರಿಸಲಾಗಿದೆ. ಮೇಲ್ವಿಚಾರಣೆಗಾಗಿ ಮಾನಿಟರಿಂಗ್ ವೆಲ್ಗಳು ಮತ್ತು ಸಾಧನಗಳನ್ನು ಅಳವಡಿಸಲಾಗುತ್ತವೆ. ಅಗತ್ಯವಿದ್ದಲ್ಲಿ ಮಾತ್ರ ನಿಯಂತ್ರಿತ ಸ್ಫೋಟ ವಿಧಾನವನ್ನು ಅನುಮೋದಿತ ಪ್ರಕ್ರಿಯೆಗಳಡಿ, ತರಬೇತಿ ಪಡೆದ ತಜ್ಞರ ಮೇಲ್ವಿಚಾರಣೆಯಲ್ಲಿ ಸೂಕ್ತ ಗಾಳಿಚಲನೆ ಮತ್ತು ನಿಯಂತ್ರಣ ಕ್ರಮಗಳೊಂದಿಗೆ ನಡೆಸಲಾಗುತ್ತದೆ, ಇಂತಹ ಅತ್ಯಾಧುನಿಕ ಕ್ರಮಗಳಿಂದ ಸ್ಥಳೀಯ ಸಮುದಾಯದ ಸುರಕ್ಷೆಯನ್ನೂ ಖಚಿತಪಡಿಸಲಾಗುತ್ತಿದೆ.
ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ (ಖಾಸಗಿ- ಸರ್ಕಾರಿ ಸಹಭಾಗಿತ್ವ) ನಿರ್ವಿುಸಲಾಗುತ್ತಿದ್ದು, ಯೋಜನೆಯ ಹೊಣೆಗಾರಿಕೆ ಹೊತ್ತಿರುವ ಎಂಇಐಎಲ್ನ ಎಂಎಸ್ಎಸ್ಪಿಐಎಲ್ ಶೇ. 60ರಷ್ಟು ಹೂಡಿಕೆ ಮಾಡುತ್ತಿದೆ.