ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ 
ರಾಜ್ಯ

ಡಿಕೆಶಿ ಸಂಪುಟದ ಸರಾಸರಿ ವಯಸ್ಸು 60

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದ ಸರಾಸರಿ ವಯಸ್ಸು 60 ರಿಂದ 61 ವರ್ಷಗಳ ನಡುವೆ ದಾಖಲಾಗಿದೆ.
64 ವಯಸ್ಸಿನ ಅನುಭವಿ ರಾಜಕಾರಣಿ ಡಿ.ಕೆ.ಶಿವಕುಮಾರ್, ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ (46) ಹಾಗೂ ಪ್ರಿಯಾಂಕ್ ಖರ್ಗೆ(47) ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರೆಂದರೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ (78) ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ (76) ಆಗಿದ್ದಾರೆ. ಮುನಿಯಪ್ಪ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದು, ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆ ನಿಭಾಯಿಸಿದ್ದಾರೆ. ಜಾರ್ಜ್ ಸಹ ವಿವಿಧ ಖಾತೆಯನ್ನು ನಿಭಾಯಿಸಿದ ಅನುಭವಿ ರಾಜಕಾರಣಿಯಾಗಿದ್ದಾರೆ.
ಡಿ.ಕೆ. ಶಿವಕುಮಾರ್ ಸಂಪುಟದ 33 ಸಚಿವರಲ್ಲಿ 70 ರಿಂದ 78 ವಯಸ್ಸಿನ ಐವರು ಶಾಸಕರು ಇದ್ದರೆ 60 ರಿಂದ 69 ವರ್ಷದೊಳಗೆ 13 ಸಚಿವರು ಸೇರಿದ್ದಾರೆ. 50 ರಿಂದ 60 ವರ್ಷದೊಳಗೆ 12 ಶಾಸಕರು ಮತ್ತು 40 ರಿಂದ 50 ವರ್ಷದೊಳಗಿನ ಮೂವರ ಶಾಸಕರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. 40 ರಿಂದ 60 ವರ್ಷದೊಳಗಿನ 15 ಶಾಸಕರು ವಿವಿಧ ಸಚಿವ ಸ್ಥಾನವನ್ನು ನಿಭಾಯಿಸುತ್ತಿರುವುದು ವಿಶೇಷ.
ಚಾಮರಾಜನಗರ ಪುಟ್ಟರಂಗ ಶೆಟ್ಟಿಗೆ 71 ವರ್ಷ ವಯಸ್ಸಾಗಿದ್ದು, ಮೊದಲ ಬಾರಿಗೆ ಸಚಿವ ಸ್ಥಾನಕ್ಕೆ ಏರಿದ್ದಾರೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕೆ.ಎನ್. ಶಿವಲಿಂಗೇಗೌಡ ಅವರಿಗೆ 68 ವರ್ಷ ತುಂಬಿದ್ದು, ಇವರು ಮೊದಲ ಬಾರಿಗೆ ಸಚಿವ ಸಂಪುಟ ಸೇರಿದ್ದಾರೆ.


ವಿದೇಶದಲ್ಲಿ ವ್ಯಾಸಂಗ, ಕಾನೂನು ಪದವಿ

ಡಾ.ಜಿ. ಪರಮೇಶ್ವರ, ಕೃಷ್ಣಬೈರೇಗೌಡ ವಿದೇಶದಲ್ಲಿ ವ್ಯಾಸಂಗ ಮಾಡಿದ್ದು, ಎಂ.ಬಿ. ಪಾಟೀಲ್, ಈಶ್ವರ್ ಬಿ. ಖಂಡ್ರೆ, ಟಿ. ರಘುಮೂರ್ತಿ, ಎನ್. ಚಲುವರಾಯಸ್ವಾಮಿ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ಬಸವರಾಜ ರಾಯರಡ್ಡಿ, ರುದ್ರಪ್ಪ ಲಮಾಣಿ, ಕೆ.ಎಚ್. ಮುನಿಯಪ್ಪ ಕಾನೂನು ಪದವಿ ಪಡೆದಿದ್ದು, ಇನ್ನೂ ಕೆಲವರು ಬಿಕಾಂ, ಎಂಎ ಪದವಿ ಮುಗಿಸಿರುವ ಸಚಿವರು ಸಂಪುಟದಲ್ಲಿ ಇದ್ದಾರೆ.

ವೈದ್ಯಕೀಯ ಪದವಿಧರರೇ ಹೆಚ್ಚು

ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಆರೋಗ್ಯ ಸಚಿವ ಯು.ಟಿ. ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ಎಚ್.ಸಿ. ಬಾಲಕೃಷ್ಣ, ಡಾ. ಅಜಯ್ ಸಿಂಗ್, ಪಿ.ಎಂ. ನರೇಂದ್ರ ಸ್ವಾಮಿ ವೈದ್ಯಕೀಯ ಪದವಿ ಮುಗಿಸಿದ್ದಾರೆ.
70 ರಿಂದ 78 ವರ್ಷದೊಳಗೆ 5 ಸಚಿವರು
60 ರಿಂದ 69 ವರ್ಷದೊಳಗೆ 13 ಸಚಿವರು
50 ರಿಂದ 60 ವರ್ಷದೊಳಗೆ 12 ಸಚಿವರು
40 ರಿಂದ 50 ವರ್ಷದೊಳಗೆ 3 ಸಚಿವರು