High court 
ರಾಜ್ಯ

ಪಾಸ್​ಪೋರ್ಟ್​ ಸೇವಾ ಕೇಂದ್ರಕ್ಕೆ ಆಕ್ಷೇಪಿಸಿದ್ದ ಅರ್ಜಿ ವಜಾ| High court

ಬೆಂಗಳೂರು: ಕೋರಮಂಗಲದ ಸಾರ್ವಜನಿಕ ಆಟದ ಮೈದಾನಕ್ಕೆ ಸೇರಿದ್ದ ಜಮೀನಿನಲ್ಲಿ ಪಾಸ್​ಪೋರ್ಟ್​ ಸೇವಾ ಕೇಂದ್ರ ನಿರ್ಮಿಸಲಾಗುತ್ತಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.
ಡಾ.ಬಿ.ಆರ್​. ಅಂಬೇಡ್ಕರ್​ ಯೂತ್​ ಸೋಷಿಯಲ್​ ಆ್ಯಂಡ್​ ಕಲ್ಚರಲ್​ ವೆಲ್ಫೇರ್​ ಟ್ರಸ್ಟ್​ ಸಲ್ಲಿಸಿದ್ದ ಪಿಐಎಲ್​ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಕೋರಮಂಗಲದ ಸರ್ವೇ ನಂ.12ರಲ್ಲಿರುವ ಸುಮಾರು 1.30 ಎಕರೆ ಜಮೀನನ್ನು ಹಲವು ದಶಕಗಳಿಂದ ಶಾಲಾ ಮಕ್ಕಳು ಮತ್ತು ಸ್ಥಳಿಯರು ಆಟದ ಮೈದಾನವಾಗಿ ಬಳಸುತ್ತಿದ್ದರು. ಅದನ್ನು ಅತಿಕ್ರಮಣ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಅಲ್ಲಿ ಪಾಸ್​ಪೋರ್ಟ್​ ಸೇವಾ ಕೇಂದ್ರ ನಿರ್ಮಿಸುತ್ತಿದೆ. ಕಾಂಪೌಂಡ್​ ನಿರ್ಮಿಸಿ ಸಾರ್ವಜನಿಕರ ಪ್ರವೇಶ ತಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಮಂಜೂರಾದ ಜಾಗ ಪ್ರಸ್ತುತ ಸ್ಥಳದಿಂದ 1.5 ಕಿ.ಮೀ ದೂರದಲ್ಲಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರದ ಪರ ವಾದಿಸಿದ ವಕೀಲರು, 1994ರ ಮೂಲ ಮಂಜೂರಾತಿ ಆದೇಶದಲ್ಲಿ ಸರ್ವೇ ನಂಬರ್​ ನಮೂದಿಸುವಾಗ ತಪ್ಪಾಗಿತ್ತು. ಈ ತಪ್ಪನ್ನು ಸರಿಪಡಿಸಿ ರಾಜ್ಯ ಸರ್ಕಾರ 2025ರಲ್ಲಿ ಆದೇಶ ಹೊರಡಿಸಿದೆ. ಅದರಂತೆ ವಿವಿಧ ಸರ್ವೇ ನಂಬರ್​ಗಳ ಒಟ್ಟು 3 ಎಕರೆ ಜಮೀನನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. 

ಜಮೀನಿನ ಕಾನೂನುಬದ್ಧ ಮಂಜೂರಾತಿ:

ವಿವಾದಿತ ಜಮೀನು ಕರ್ನಾಟಕ ಉದ್ಯಾನವನಗಳು ಮತ್ತು ಆಟದ ಮೈದಾನ ಕಾಯ್ದೆ ಅಡಿಯಲ್ಲಿ ಸಂರಕ್ಷಿತ ಪ್ರದೇಶ ಎಂದು ದಾಖಲಾಗಿಲ್ಲ. ಅಲ್ಲದೆ, ಈ ಪ್ರದೇಶವು ಆಟದ ಮೈದಾನ ಎಂಬುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿಯೇ ತನಗೆ ಮಂಜೂರಾದ ಜಾಗದಲ್ಲಿ ಸೇವಾ ಕೇಂದ್ರ ನಿರ್ಮಿಸುತ್ತಿದೆ ಎಂದು ಹೈಕೋರ್ಟ್​ ತೀರ್ಪು ನೀಡಿದೆ. ನಗರದಲ್ಲಿ ಮುಕ್ತಪ್ರದೇಶಗಳು ಕಡಿಮೆಯಾಗುತ್ತಿವೆ ಎಂಬ ಅರ್ಜಿದಾರರ ಕಳಕಳಿ ಸರಿಯಿದ್ದರೂ ಕಾನೂನುಬದ್ಧವಾಗಿ ಮಂಜೂರಾದ ಜಮೀನನ್ನು ಬಳಸದಂತೆ ಸರ್ಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.