ಕೀಟ ಪ್ರಪಂಚ ಸ್ಟಾಲ್‌ನಲ್ಲಿ ಗಮನಸೆಳೆದ ವಿವಿಧ ಕೀಟಗಳು. ಕೃಷಿ ಮೇಳದ ಸ್ಟಾಲ್‌ನಲ್ಲಿ ಗಮನಸೆಳೆದ ಬೀದರ್‌ನ ಜೈ ಸೇವಾ ಆದಿವಾಸಿ ಜಡಿಬುಟಿ ತಂಡದ ಗಿಡಮೂಲಿಕೆ. ಕಪ್ಪು ಸೈನಿಕ ರೇಷ್ಮೆ ಹುಳುಗಳು ರೊಟ್ಟಿ ತಿಂದು ಗೊಬ್ಬರ ಮಾಡುತ್ತಿರುವುದು. 
ರಾಜ್ಯ

ರಾಯಚೂರು ಉತ್ಸವದಲ್ಲಿ ಬೆರಗು ಮೂಡಿಸಿದ ವಿಸ್ಮಯಕಾರಿ ಕೀಟ ಪ್ರಪಂಚ

ಪ್ರಮುಖ ಮುಖ್ಯಾಂಶಗಳು

  • ವ್ಯರ್ಥ ಆಹಾರ ಕೊಳೆಸುತ್ತದೆ ಕರಿರೇಷ್ಮೆ
  • ಮಾಹಿತಿ ಪಡೆದ ವಿದ್ಯಾರ್ಥಿಗಳು, ರೈತರು
ದೇವದುರ್ಗ: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಕೃಷಿ ಮೇಳದಲ್ಲಿ ಆಯೋಜಿಸಿದ್ದ ಸ್ಟಾಲ್‌ಗಳು ವಿದ್ಯಾರ್ಥಿಗಳು, ಯುವಕರು, ರೈತರಿಗೆ ಉಪಯುಕ್ತ ಮಾಹಿತಿ ಧಾರೆ ಎರೆದವು. ಸುತ್ತಲಿನ ಪರಿಸರ, ನೀರು, ಮಣ್ಣು, ವಿಸ್ಮಯಕಾರಿ ಕೀಟ ಪ್ರಪಂಚ ಬೆರಗು ಮೂಡಿಸಿದವು. ಕೃಷಿ ಜತೆಗೆ ಕೃಷಿ ಅವಲಂಬಿತ ಜೀವರಾಶಿಗಳ ಪ್ರಾಮುಖ್ಯ ತಿಳಿಸಲಾಯಿತು.
ರೇಷ್ಮೆ ಇಲಾಖೆಯಿಂದ ಆಯೋಜಿಸಿದ್ದ ಕೀಟ ಪ್ರಪಂಚ ಮಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕಣ್ಣಿಗೆ ಕಾಣದ ಕೀಟದಿಂದ ದೊಡ್ಡಗಾತ್ರದ ಹುಳುವಿನ ಬಗ್ಗೆಯೂ ಮಾಹಿತಿ ನೀಡಲಾಯಿತು. ರೈತರ ಉಪಯೋಗಿ ಕೀಟಗಳು, ರೋಗತರುವ ಹುಳುಗಳು, ಮನೋರಂಜನೆ ಕೀಟಗಳು, ವಿಷಕಾರಿ ಹುಳುಗಳ ಬಗ್ಗೆ ವಿವರ ನೀಡಲಾಯಿತು.
ಪರಿಸರದಲ್ಲಿ ಶೇ.38 ಪಾಲು ದುಂಬಿಗಳು ಪಡೆದಿದ್ದರೆ, ಶೇ.16 ಚಿಟ್ಟೆಗಳು ಪಡೆದಿವೆ. ಶೇ.13 ಜೇನುನೊಣ, ಇರುವೆ ಕಣಜಗಳಿವೆ. ಶೇ.12 ನೊಣ, ಸೊಳ್ಳೆಗಳಿದ್ದರೆ, ಶೇ.11 ತಿಗಣೆಗಳಿವೆ. ಶೇ.4 ಪಾಲಿನಿಯೋಪ್ಪೆರಾ, ಶೇ.0.9 ಪ್ಯಾಲಿನಿಯೋ ಕೀಟ ಒಳಗೊಂಡಿದೆ.
ಸಣ್ಣ, ಅತಿಸಣ್ಣ, ಕಣ್ಣಿಗೆ ಕಾಣಿಸದ ಇತರ ಕೀಟಗಳು ಶೇ.5.1ರಷ್ಟಿವೆ. ಅದರಲ್ಲಿ ಹಲವು ಕೀಟದ ಲಾರ್ವ್ ಅಲಂಕಾರಿಕ ವಸ್ತು ತಯಾರಿಕೆ ಬಳಕೆಯಾಗುತ್ತಿವೆ. ಲಿಪ್‌ಸ್ಟಿಕ್, ಬ್ಯಾಂಗಲ್ಸ್(ಬಳೆ) ತಯಾರಿಕೆ, ತಂಪುಪಾನೀಯ ಬಣ್ಣಕ್ಕೂ ಬಳಸಲಾಗುತ್ತಿದೆ. ಅಲ್ಲದೆ ಗಮ್, ಮಸಿ, ಅಂಟು, ಇಂಕು, ಬಟ್ಟೆ ಶೈನಿಂಗ್, ದಾರಕ್ಕೆ ಬಣ್ಣದ ಹೊಳಪು ನೀಡಲು ಕೀಟಗಳ ಲಾರ್ವ್ ಬಳಸಲಾಗುತ್ತಿದೆ.
ದುಂಬಿಯಲ್ಲಿ ಮೂರು ತಳಿಯ ರೇಷ್ಮೆ ರೈತರಿಗೆ ಉಪಯುಕ್ತವಾಗಿವೆ. ಸಾಮಾನ್ಯ ರೇಷ್ಮೆ ಹುಳುವಿಗೆ ಕಾಳಜಿ ಅಧಿಕವಿದ್ದರೆ ಕಪ್ಪು ಸೈನಿಕ ರೇಷ್ಮೆಹುಳು ಕಡಿಮೆ ಖರ್ಚು ಹೊಂದಿದೆ. ಕಪ್ಪು ಸೈನಿಕ ರೇಷ್ಮೆ ಗೊಬ್ಬರ ಕೊಳೆಸುವ ಶಕ್ತಿ ಹೊಂದಿದ್ದು ವ್ಯರ್ಥ ಆಹಾರ ಪದಾರ್ಥ ತಿಂದು ಗೊಬ್ಬರ ಮಾಡುತ್ತದೆ.
ಇದು ರೇಷ್ಮೆದಾರದ ಜತೆ ಕೋಳಿ ಸಾಗಣೆಗೆ ಆಹಾರ ಕೂಡ ಒದಗಿಸಲಿದೆ. ಇದಲ್ಲದೆ ಇರುವೆ, ಜೇನುನೊಣ, ಬೋರುಳ, ಪತಂಗ, ಎಂಡೆಹುಳು ಕೀಟದ ಬಗ್ಗೆ ಮಾಹಿತಿ ಒದಗಿಸಲಾಯಿತು.
ಇನ್ನು ಹಲವು ಅಪಾಯಕಾರಿ ಕೀಟದ ಬಗ್ಗೆ ಮಾಹಿತಿ ನೀಡಲಾಯಿತು. ರೆಡ್‌ವಿಡ್ ತಿಗಣೆ ಕಚ್ಚಿದರೆ ಛಾಗನ್ ಕಾಯಿಲೆ, ಟ್ಸೆಟ್ಸೆ ನೊಣ ಕಚ್ಚಿದರೆ ನಿದ್ರಾರೋಗ, ನೊಣ ಕಚ್ಚುವುದರಿಂದ ಪೋಲಿಯೋ, ಹೇನು ಕಡಿತದಿಂದ ಜ್ವರ, ಟ್ರೆಂಡ್‌ಜ್ವರ, ಕರಿನೊಣ ಕಡಿತದಿಂದ ಅಂಕೋಸರ್ಸಿ ಯಾಸಿನ್, ಜೇನು ಕಡಿತದಿಂದ ಕಾಲಾ ಅಜಾರ್, ಚರ್ಮದ ಹುಣ್ಣು, ಬ್ಲಾಕ್‌ನೈಟ್ ಕಚ್ಚುವುದರಿಂದ ಕಣ್ಣಿನ ಲೋಯಾಸಿಸ್ ರೋಗ ಆವರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಲಾಯಿತು.

ಲಂಬಾಣಿ ಗಿಡಮೂಲಿಕೆ

ಸ್ಟಾಲ್‌ನಲ್ಲಿ ಬೀದರ್ ಜಿಲ್ಲೆಯ ಹಳ್ಳದಕೆರೆಯ ಜೈ ಸೇವಾ ಆದಿವಾಸಿ ಜಡಿಬುಟಿ ತಂಡದ ಗಿಡಮೂಲಿಕೆ ಗಮನ ಸೆಳೆಯಿತು. ಕೀಲುನೋವುಗೆ ಭರಮದಂಡಿ ಬೇರು, ಮೂಲವ್ಯಾಧಿಗೆ ಪಾಳಸ ಸಬೇದ, ಸಕ್ಕರೆ ಕಾಯಿಲೆಗೆ ಕುಚುಲಾ ಸತ್ವ ಗಿಡಮೂಲಿಕೆ, ಲೈಂಗಿಕ ಸಮಸ್ಯೆಗೆ ಸತವಾ ಸಲಾಜಿತ್, ಬೊಜ್ಜು ಕರಗಿಸಲು ಮದನಮಸ್ತ ಬೇರು, ಉಷ್ಣತೆ ಕಡಿಮೆ ಮಾಡಲು ನಿರಂಜಲ ಫಲ, ವಿರ‌್ಯಾಣುವೃದ್ಧಿಗೆ ರತನ್‌ಪುರುಷ, ಗ್ಯಾಸ್ ಅಸಿಡಿಟಿಗೆ ಮನಗರ ಬೇರು, ಕ್ಯಾಲ್ಸಿಯಂ ಕೊರತೆಗೆ ಶಕ್ತಿಭೂಟಿ ಬೇರು, ಥೈರಾಯ್ಡಗೆ ಮಧುಕಲ್ಪನಾ ಚೆಕ್ಕೆ, ಅಲರ್ಜಿಗೆ ಮಗರ್‌ತಾಜ್,
ಕೂದಲು ಸಮಸ್ಯೆಗೆ ಜಟಾಶಂಕರ್ ಬೇರು, ಕಫ ಅಸ್ತಮರೋಗಕ್ಕೆ ರೋಮ ಮಸ್ತಗಿ, ಚರ್ಮರೋಗಕ್ಕೆ ಅಮರ್‌ಸಾರ್, ತೂಕ ಹೆಚ್ಚಿಸಲು ಭಾರಫತ್ ಮೂಲಿಕೆ, ಮೊಡವೆ ಕಪ್ಪುಕಲೆಗೆ ರೋಷನ್ ತಾರಾ, ರಕ್ತಶುದ್ಧಿಗೆ ರಕ್ತಚಂದ ಬೇರು, ಬಿಪಿಗೆ ಸತ್ತವರಿಬೇರು, ಸ್ತ್ರೀರೋಗ ಸಮಸ್ಯೆಗೆ ವರದನಿ ಬೇರಿನ ಬಗ್ಗೆ ಮಾಹಿತಿ ನೀಡಲಾಯಿತು. ಇದಕ್ಕೆ ಮಹಿಳೆಯರು, ವೃದ್ಧರು ಹೆಚ್ಚು ಆಕರ್ಷಿತರಾಗಿದ್ದು ಕಂಡುಬಂತು.
"

ನಲವತ್ತು ವರ್ಷಗಳಿಂದ ಒಕ್ಕಲುತನ ಮಾಡುತ್ತಿದ್ದು, ಕೃಷಿಮೇಳ ತುಂಬ ಉಪಯುಕ್ತವಾಗಿದೆ. ಕೀಟ, ಹುಳುಗಳ ಬಗ್ಗೆ ಮಾಹಿತಿ ನೀಡಿದ್ದು ರೇಷ್ಮೆ ಬೆಳೆ ಮಾಡುವ ಆಸಕ್ತಿ ಮೂಡಿದೆ. ಹತ್ತು ಎಕರೆ ಜಮೀನು ಇದ್ದು ಮೆಣಸಿನಕಾಯಿ, ಹತ್ತಿ ಮಾಡುತ್ತೇನೆ. ಇಲ್ಲಿ ನೋಡಿದ ಮೇಲೆ ತೋಟಗಾರಿಕೆ ಬೆಳೆಗಳನ್ನು ಮಾಡುವ ಯೋಚನೆಯಿದೆ.