ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ‘ಶ್ರೀ ಆದಿ ಶಂಕರಾಚಾರ್ಯರ ಜಯಂತಿ’ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಆದಿತ್ಯ ವೈದ್ಯ, ನಾರಾಯಣಪ್ಪ ಕುರುಬರ, ಮಹಾವೀರ ಬೋರಣ್ಣವರ, ಇತರರಿದ್ದಾರೆ.
- ಉಪನ್ಯಾಸಕ ಆದಿತ್ಯ ವೈದ್ಯ ಹೇಳಿಕೆ
- ಜಿಲ್ಲಾಡಳಿತದಿಂದ ಜಯಂತಿ ಆಚರಣೆ
ವಿಜಯಪುರ: ವೇದಗಳಿಗೆ ಭಾಷ್ಯ ಬರೆದು ಜಗತ್ತಿಗೆ ಅದ್ವೈತ ತತ್ವ ತಿಳಿಸಿಕೊಟ್ಟವರು ಶ್ರೀ ಆದಿ ಶಂಕರಾಚಾರ್ಯರು ಎಂದು ಆದಿತ್ಯ ವೈದ್ಯ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಶ್ರೀ ಆದಿ ಶಂಕರಾಚಾರ್ಯರ ಜಯಂತಿ’ ಆಚರಣೆ ಅವರು ಉಪನ್ಯಾಸ ನೀಡಿದರು.
ಇಡೀ ದೇಶ ಸಂಚರಿಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರ ಜೀವನ ಇಂದಿನವರಿಗೆ ಆದರ್ಶಪ್ರಾಯವಾಗಿದೆ. ಶಂಕರಾಚಾರ್ಯರು ಮಾಹಾನ್ ವಿದ್ವಾಂಸ, ಕವಿಯಾಗಿದ್ದರು ಅವರ ಜೀವನದ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ಅವರು ಹೇಳಿದರು.
ವಿವಿಧ ಸಿದ್ಧಾಂತಗಳ ಅರ್ಥವನ್ನು ಸರಳವಾಗಿ ಜನರಿಗೆ ತಲುಪಿಸುವಲ್ಲಿ ಶಂಕರಾಚಾರ್ಯರ ಪಾತ್ರ ಅಪಾರವಾಗಿದೆ. ಅವರು ಬರೆದ ಭಾಷ್ಯಗಳು ಇಂದಿಗೂ ತತ್ವಜ್ಞಾನಿಗಳಿಗೆ ಮಾರ್ಗದರ್ಶಕವಾಗಿವೆ ಎಂದು ವಿವರಿಸಿದರು.
ಶಂಕರಾಚಾರ್ಯರು ಪ್ರತಿಪಾದಿಸಿದ ತತ್ವದ ಮೂಲಕ ಮಾನವ ಜೀವನದ ಉನ್ನತ ಅರ್ಥವನ್ನು ತಿಳಿಸುತ್ತದೆ. ಈ ತತ್ವವು ವ್ಯಕ್ತಿಯನ್ನು ಆತ್ಮಸಾಕ್ಷಾತ್ಕಾರದ ದಾರಿಗೆ ಒಯ್ಯುತ್ತದೆ ಎಂದರು.
ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮಾತನಾಡಿ, ಶಂಕರಾಚಾರ್ಯರ ತತ್ವೋಪದೇಶಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಧಿಕಾರಿ ನಾರಾಯಣಪ್ಪ ಕುರುಬರ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮೋಹನ ಕಟ್ಟಿಮನಿ, ವಿದ್ಯಾವತಿ ಅಂಕಲಗಿ, ಶ್ರೀರಾಮ ಭಟ್ಟ ಇತರರಿದ್ದರು.