ಪಟ್ಟಣದ ಕೋಟೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಐದು ದಿನಗಳ ಆರಾಧನೆಯ ಕೊನೆಯ ದಿನವಾದ ಸೋಮವಾರ ವೈಭವದ ಉತ್ತರಾರಾಧನೆಯಂದು ಉಯ್ಯಲೆ ಸೇವೆ ನಡೆಯಿತು.
ಚನ್ನರಾಯಪಟ್ಟಣ: ಕಲಿಯುಗದ ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ, ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಐದು ದಿನಗಳ ಆರಾಧನೆಯ ಕೊನೆಯ ದಿನವಾದ ಸೋಮವಾರ ವೈಭವದ ಉತ್ತರಾರಾಧನೆಯೊಂದಿಗೆ ಸಂಪನ್ನಗೊಂಡಿತು.
ಉತ್ತರಾರಾಧನೆ ಅಂಗವಾಗಿ ರಾಯರ ಮಠದಲ್ಲಿ ಉತ್ತರಾರಾಧನೆ ಸಡಗರ ಮನೆ ಮಾಡಿತ್ತು. ಬೆಳಗ್ಗೆ 5.30ಕ್ಕೆ ಸುಪ್ರಭಾತದೊಂದಿಗೆ ಉತ್ತರಾರಾಧನೆ ಶುರುವಾಯಿತು. ಪ್ರಾತಃಕಾಲದಿಂದಲೇ ಸ್ತೋತ್ರ ಪುನಶ್ಚರಣಿ, ಉಷಕಾಲ ಪೂಜೆ, ಫಲ ಪಂಚಾಮೃತಾಭಿಷೇಕ, ಮಹಾಭಿಷೇಕ, ತುಳಸಿ ಪೂಜೆ, ಶ್ರೀರಾಯರ ಪಾದಪೂಜೆ, ಅಲಂಕಾರ ಸೇವೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಸಂಜೆ ಕಂಗೊಳಿಸುವ ವಿದ್ಯುತ್ ದೀಪ ಹಾಗೂ ವಿವಿಧ ಹೂವುಗಳಿಂದ ಅಲಂಕೃತವಾದ ಮುತ್ತಿನ ರಥದ ಮಂಟಪದಲ್ಲಿ ಆಸೀನರಾಗಿದ್ದ ಶ್ರೀ ಗುರು ಸಾರ್ವಭೌಮರ ಉತ್ಸವ ಕಲಾ ಪರಿವಾರದೊಂದಿಗೆ ಶ್ರೀಮಠದಿಂದ ಪ್ರಾರಂಭವಾಗಿ ಕೋಟೆ ಬೀದಿ ಮೂಲಕ ಸಾಗಿ ನವೋದಯ ವೃತ್ತ, ಕೃಷ್ಣರಾಜೇಂದ್ರ ವೃತ್ತದಿಂದ ಸಾಗಿ ಶ್ರೀಮಠದಲ್ಲಿ ಅಂತ್ಯಗೊಂಡಿತು.
ಉತ್ಸವದ ದಾರಿಯುದ್ದಕ್ಕೂ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿದ ನಾಗರೀಕರು ಪ್ರಾರ್ಥನೆ ಸಲ್ಲಿಸಿದರು. ಕಲಾ ಪರಿವಾರದವರ ಭಜನೆ ಹಾಗೂ ಬಾಲು ಮತ್ತು ತಂಡದವರಿಂದ ಮಂಗಳವಾದ್ಯ ಭಕ್ತರ ಗಮನ ಸೆಳೆಯಿತು.
ಸಂಜೆ ಸಾಂಸ್ಕೃತಿಗೆ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಭಜನಾ ಮಂಡಳಿ ಮತ್ತು ಸದ್ಗುರು ಭಜನಾ ಮಂಡಳಿ ಇವರಿಂದ ಭಜನೆ ಕಾರ್ಯಕ್ರಮ ನೆರವೇರಿತು. ರಥೋತ್ಸವದ ಓಕುಳಿ, ತದನಂತರ ಸವತೋಭದ್ರ ಮಂಡಲ ಪೂಜೆ, ಉಯ್ಯಲೆ ಸೇವೆ, ಸರ್ವ ಸೇವೆ, ಮಹಾ ಪೂಜೆ, ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವೆಗಳು ನೆರವೇರಿದವು.
ಕೊನೆಯ ದಿನ ಭಕ್ತರ ಹರ್ಷೋದ್ಗಾರ, ದಾಸರ ಹಾಡುಗಳ ಭಕ್ತಿ ಸಂಗೀತ ನಡುವೆ ರಥೋತ್ಸವ ಸಡಗರರಿಂದ ಜರುಗಿತು. ರಥ ಮಠದ ಪ್ರಾಂಗಣದ ಸುತ್ತಲೂ ಪ್ರದಕ್ಷಣೆಗೆ ತೆಗೆದುಕೊಂಡು ಹೋದಾಗ ಅದರ ಹಿಂದೆಯೇ ಸಾಗಿದ ಭಕ್ತರು ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಪ್ರದಕ್ಷಿಣೆ ಪೂರ್ಣಗೊಂಡು ಸ್ಥಸ್ಥಾನಕ್ಕೆ ಮರಳಿದ ಬಳಿಕ ಭಕ್ತರಲ್ಲಿ ಹರ್ಷೋದ್ಘಾರ ಮನೆಮಾಡಿತ್ತು. ರಾಯರನ್ನು ಸ್ತುತಿಸುವ ಹಾಡುಗಳು ಮೊಳಗಿದವು. ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಾಸು ಆಚಾರ್ಯರ ನೇತೃತ್ವದಲ್ಲಿ ಅರ್ಚಕರಾದ ಲಕ್ಷ್ಮೀಶ ಆಚಾರ್ಯ, ಗುರುರಾಜ ಆಚಾರ್ಯ, ವಿಷ್ಣು ಆಚಾರ್ಯ, ಶ್ರೀನಿವಾಸ್ ಹತ್ವಾರ್, ನಾಗರಾಜ್ ಭಟ್, ಸೀತಾರಾಮ್ ಭಟ್, ಶ್ರೀನಿವಾಸ್ ಜೋಶಿ ಹಾಗೂ ವಾದಿರಾಜ್ ಭಟ್, ವಾಸಣ್ಣ, ತಂಡದಿಂದ ಪೂಜಾ ಕೈಂಕರ್ಯಗಳು ನೆರವೇರಲ್ಪಟ್ಟವು. ಈ ವೇಳೆ ಶ್ರೀಮಠದ ಅಧ್ಯಕ್ಷ ಸಿ.ವಿ.ರಾಜಪ್ಪ, ಕಾರ್ಯದರ್ಶಿ ಸಿ.ಎನ್.ಪುಟ್ಟಸ್ವಾಮಿ, ಖಜಾಂಚಿ ಸಿ.ಎಂ.ರಾಘವೇಂದ್ರ ಅಂಕಂ, ಸಹ ಕಾರ್ಯದರ್ಶಿ ಸುನಿಲ್, ಸಹ ಖಜಾಂಚಿ ಸಿ.ಎನ್.ಪ್ರದೀಪ್ ನಿರ್ದೇಶಕರಾದ, ಸಿ.ಜಿ.ರಾಜಪ್ಪ, ಸಿ.ಎನ್.ಹರ್ಷ, ಸಿ.ಎನ್.ದೀಪಕ್, ಸಿ.ಆರ್.ರಘು, ಶ್ರೀಮಠದ ವ್ಯವಸ್ಥಾಪಕ ಮುರಳಿ ಸೇರಿದಂತೆ ಶ್ರೀ ಮಠದ ಸಿಬ್ಬಂದಿ ಇದ್ದರು.