ಬೆಂಗಳೂರು : ಬೆಂಗಳೂರು ಗಾಯನ ಸಮಾಜವು ಕಳೆದ 121 ವರ್ಷಗಳಿಂದ ಕಲೆ, ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಅನನ್ಯ ಕೊಡುಗೆ ನೀಡುತ್ತ ಬಂದಿದೆ ಎಂದು ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.
ಗಾಯನ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ 56ನೇ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
121 ಎಂಬ ಸಂಖ್ಯೆಯನ್ನು ಹಿಂದಿನಿಂದ ಓದಿದರೂ 121 ಎಂದೇ ಬರುತ್ತದೆ. ಗಾಯನ ಸಮಾಜದ ಸೇವೆಯೂ ಇದೇ ರೀತಿ ಯಾವ ಕಡೆಯಿಂದ ನೋಡಿದರೂ ಅದರ ಸೇವೆ ಸಮಾನವಾಗಿದ್ದು, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ನಿರಂತರ ಎಂಬುದರ ಪ್ರತೀಕವಾಗಿದೆ.
ಸಂಗೀತ ಕ್ಷೇತ್ರದಲ್ಲಿ ಹಲವು ಬಗೆಯ ವಾದ್ಯಗಳಿದ್ದರೂ ವೀಣೆ ಮತ್ತು ಕೊಳಲುಗಳಿಗೆ ವಿಶೇಷ ಮಹತ್ವವಿದೆ. ವೀಣೆಯು ವಿದ್ಯೆಯ ಅಧಿದೇವತೆ ಸರಸ್ವತಿಯ ಕೈಯಲ್ಲಿದ್ದರೆ, ಕೊಳಲು ಶ್ರೀಕೃಷ್ಣನ ಕೈಯಲ್ಲಿದೆ. ದೇವರೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ವಾದ್ಯಗಳನ್ನು ಕಲಿತು, ಅವುಗಳಲ್ಲಿ ನೈಪುಣ್ಯ ಸಾಧಿಸುವುದು ಕಲಾವಿದರ ದೈವಿಕ ಕೃಪೆಗೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಕೊಳಲು ವಾದಕ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹಾಗೂ ವೀಣಾವಾದಕಿ ವಿದುಷಿ ಗೀತಾ ರಮಾನಂದ್ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಶತಾವಧಾನಿ ಗಣೇಶ್ ವಿವರಿಸಿದರು.
ಸಮಾರಂಭದಲ್ಲಿ ಹಿರಿಯ ಕೊಳಲು ವಾದಕ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರಿಗೆ ಕರ್ನಾಟಕ ಕಲಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್, ಕಾರ್ಯದರ್ಶಿ ನಾಗರಾಜು, ಸದಸ್ಯ ಡಾ.ಪಿ. ನಾಗಭೂಷಣ್, ಸಮ್ಮೇಳನಾಧ್ಯಕ್ಷೆ ವಿದುಷಿ ಗೀತಾ ರಮಾನಂದ್ ಮತ್ತಿತರರು ಉಪಸ್ಥಿತರಿದ್ದರು.