ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಜೋಡಣೆದಾರರ ಸಭೆಯಲ್ಲಿ ಸಂಘದ ಅಧ್ಯಕ್ಷ ಪರಮಾನಂದ ಭಾವಿಕಟ್ಟಿ ಮಾತನಾಡಿದರು. ಪ್ರಭು ಕರಲಟ್ಟಿ, ಶಂಕರ ಜಾಲಿಗಿಡದ, ವಿಶ್ವನಾಥ ಕೊಣ್ಣೂರ, ಪ್ರಕಾಶ ಮಹಾಜನ ಇತರರಿದ್ದರು.  
ರಾಜ್ಯ

ಜವಳಿ ಮಜೂರಿ ರೂ.10 ಹೆಚ್ಚಳ

ಪ್ರಮುಖ ಮುಖ್ಯಾಂಶಗಳು

  • ಉಭಯ ಸಂಘಟನೆಗಳ ಪರಸ್ಪರ ಒಪ್ಪಿಗೆ
  • ನೇಕಾರ ಕುಟುಂಬಗಳಿಗೆ ಆರ್ಥಿಕ ನೆರವು
ರಬಕವಿ/ಬನಹಟ್ಟಿ: ಜವಳಿ ಉದ್ಯಮದ ಬೆನ್ನೆಲುಬಾಗಿರುವ ನೇಕಾರ ಸಮುದಾಯಕ್ಕೆ ಸಂತಸದ ಸುದ್ದಿಯೊಂದು ಲಭಿಸಿದೆ. ಸೈಜಿಂಗ್ ಹಾಗೂ ಕಾರ್ಖಾನೆಗಳಲ್ಲಿ ಹೋಗಿ ನೇಯ್ಗೆ ಮಾಡುವ ನೇಕಾರರ ಮಜೂರಿ ಹೆಚ್ಚಳದ ಬೆನ್ನಲ್ಲೇ, ಇದೀಗ ಜೋಡಣೆದಾರರ (ಮಾಲೀಕರಿಂದ ಮಗ್ಗಗಳನ್ನು ಪಡೆದು ಮನೆಯಲ್ಲಿಯೇ ನೇಯ್ಗೆ ಮಾಡುವ ನೇಕಾರರು) ಮಜೂರಿಯನ್ನೂ ಪ್ರತಿ 9 ವಾರದ ಸೀರೆಗೆ ರೂ.10 ಹೆಚ್ಚಳ ಮಾಡಲು ಪವರ್‌ಲೂಮ್ ಮಾಲೀಕರ ಸಂಘ ಹಾಗೂ ಜೋಡಣೆದಾರರ ಸಂಘದ ನಡುವೆ ನಡೆದ ಮಾತುಕತೆಯಲ್ಲಿ ಪರಸ್ಪರ ಒಪ್ಪಿಗೆ ದೊರೆತಿದೆ.
ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಉಭಯ ಸಂಘಟನೆಗಳ ಪ್ರತಿನಿಧಿಗಳು ಸುದೀರ್ಘ ಚರ್ಚೆ ನಡೆಸಿ, ಮುಂದಿನ ಎರಡು ವರ್ಷಗಳವರೆಗೆ ಈ ಹೆಚ್ಚಳ ಜಾರಿಯಲ್ಲಿರಲಿದೆಯೆಂದು ನಿರ್ಧರಿಸಲಾಯಿತು. ಈ ತೀರ್ಮಾನದಿಂದ ನೇಕಾರ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯಲಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಗಲಿದೆಯೆಂಬ ಆಶಾಭಾವನೆ ವ್ಯಕ್ತವಾಗಿದೆ.
ಪವರ್‌ಲೂಮ್ ಮಾಲೀಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ ಮಾತನಾಡಿ, ಈ ಹಿಂದೆ ಪ್ರತಿ ಸೀರೆಗೆ ಕನಿಷ್ಠ ರೂ.113 ರಿಂದ ಗರಿಷ್ಠ ರೂ.300ರವರೆಗೆ ಮಜೂರಿ ನೀಡಲಾಗುತ್ತಿತ್ತು. ಇದೀಗ ಅದನ್ನು ರೂ.123ರಿಂದ ರೂ.310 ವರೆಗೆ ಹೆಚ್ಚಿಸಲಾಗಿದೆ. ಸೀರೆಗಳ ಗುಣಮಟ್ಟ, ವಿನ್ಯಾಸ ಹಾಗೂ ನೇಯ್ಗೆಯ ಪ್ರಕಾರ ಮಜೂರಿ ನಿಗದಿಪಡಿಸಲಾಗುತ್ತದೆ. ನೇಕಾರರ ಶ್ರಮಕ್ಕೆ ನ್ಯಾಯಯುತ ಪ್ರತಿಲ ದೊರಕುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನೇಕಾರ ಮಾಲೀಕರಾದ ಪ್ರಭು ಕರಲಟ್ಟಿ, ಮಲ್ಲು ಭದ್ರನ್ನವರ, ಚಂದ್ರು ಕುಲಗೋಡ, ವಿಶ್ವನಾಥ ಕೊಣ್ಣೂರ, ಪ್ರಕಾಶ ಮಹಾಜನ, ಪರಮಾನಂದ ಭಾವಿಕಟ್ಟಿ, ಸುರೇಶ ಮಠದ, ಬಸು ಮುರಗೋಡ ಇತರರಿದ್ದರು.