Bhatkal Tense  
ರಾಜ್ಯ

Bhatkal Tense: ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ: ಮೇ 27ರವರೆಗೆ ನಿಷೇಧಾಜ್ಞೆ ಜಾರಿ!

ಬಾಬುಪ್ರಸಾದ್​ ಮೋಡಿಸ್​
ಭಟ್ಕಳ: ಶಹರದಲ್ಲಿ ಹಿಂದೂ ಸಂಘಟನೆಗಳು ಮರುನಿರ್ಮಾಣ ಮಾಡಿದ್ದ ಧಾರ್ಮಿಕ ನಂಬಿಕೆಯ ‘ಮೂರಿ ನಕಟ್ಟೆ’ಯನ್ನು ಶನಿವಾರ ತಡರಾತ್ರಿ ಮತ್ತೊಂದು ಸಮುದಾಯದವರು ಒಡೆದು ಹಾಕಿದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನಲ್ಲಿ ತೀವ್ರ ಉದ್ವಿಗ್ನ(Bhatkal Tense) ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 27 ರವರೆಗೆ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗಲಾಟೆಗೆ ಕಾರಣವೇನು?

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಶಿರಸಿ ಮಾರಿಕಾಂಬಾ ದೇವಿಗೆ ಸಂಬಂಧಿಸಿದಂತೆ ‘ಹೊರೆ ದಾಟಿಸುವ’ ವಿಶೇಷ ಸಂಪ್ರದಾಯವೊಂದಿದೆ. ಊರಿನ ರೋಗರುಜಿನಗಳು, ಜಾಡ್ಯಗಳು ದೂರಾಗಲಿ ಎಂಬ ನಂಬಿಕೆಯಿಂದ ದೇವಿಯ ಗೊಂಬೆ ಹಾಗೂ ಪೂಜಾ ತ್ಯಾಜ್ಯಗಳನ್ನು ತಮ್ಮ ಊರಿನ ಗಡಿ ದಾಟಿಸಿ ತಂದು ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ಹೊರೆ ದಾಟಿಸುವ ಸಾಂಪ್ರದಾಯಿಕ ಕಟ್ಟೆಯು ಭಟ್ಕಳ ಶಹರದ ಮಧ್ಯಭಾಗದಲ್ಲಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿಯ ಸಂದರ್ಭದಲ್ಲಿ ಈ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಶನಿವಾರ ಹಿಂದೂ ಸಂಘಟನೆಗಳ ಮುಖಂಡರು ಒಟ್ಟಾಗಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಈ ಮೂರಿನಕಟ್ಟೆಯನ್ನು ಮರುನಿರ್ಮಾಣ ಮಾಡಿದ್ದರು. ಆದರೆ, ರಾತ್ರಿ ವೇಳೆ ಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಜನಸ್ತೋಮವು ಕಟ್ಟೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅದನ್ನು ಧ್ವಂಸಗೊಳಿಸಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಠಾಣೆ ಎದುರು ಧರಣಿ

ಕಟ್ಟೆ ಒಡೆದಿದ್ದನ್ನು ಖಂಡಿಸಿ ಹಿಂದೂ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ತಡರಾತ್ರಿಯೇ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಭಾರಿ ಧರಣಿ ನಡೆಸಿದರು. ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ತಾವೇ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಭಟ್ಕಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ (KSRP) ತುಕಡಿಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.