kpsc  
ರಾಜ್ಯ

ಕೆಪಿಎಸ್‌ಸಿ 18 ಅಧಿಸೂಚನೆಗಳ 2,610 ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ತಡೆ

ಒಳಮೀಸಲಾತಿ ಹೆಚ್ಚಳ ಪರಿಣಾಮ, 1,349 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯೂ ಅತಂತ್ರ, ಉಳಿದ 1,261 ಹುದ್ದೆಗಳ ನೇಮಕಾತಿ ಸ್ಥಗಿತ

ಬೆಂಗಳೂರು: ರಾಜ್ಯ ನಾಗರಿಕ ಸೇವೆಯ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೊರಡಿಸಿದ್ದ 18 ಅಧಿಸೂಚನೆಗಳ ಅಡಿಯಲ್ಲಿ ಭರ್ತಿ ಮಾಡಬೇಕಿದ್ದ ಒಟ್ಟು 2,610 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ.

ಒಳಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ಪರಿಣಾಮವಾಗಿ 2023 ಮತ್ತು 2024ನೇ ಸಾಲಿನಲ್ಲಿ ಆಯೋಗ ಕೈಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.

ರಾಜ್ಯ ಸರ್ಕಾರ 2022ರ ಮೀಸಲಾತಿ ವ್ಯವಸ್ಥೆ ಹಾಗೂ ಅದರನ್ವಯ ರೋಸ್ಟರ್ ಬಿಂದುಗಳನ್ನು ಗುರುತಿಸಿ ಜಾರಿಗೊಳಿಸಿರುವ ಆದೇಶದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿತ್ತು. ಆದರೆ, ಒಳಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶದಿಂದಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿ ವಿವಿಧ ಹಂತಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದ್ದ ನೇಮಕಾತಿಗಳಿಗೂ ತಡೆಯಾಗಿದೆ. ಈ ಕುರಿತು ಆಯೋಗ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದೆ.

1,349 ಹುದ್ದೆಗಳ ಆಯ್ಕೆ ಪೂರ್ಣ, 1,261 ಬಾಕಿ:

ಕೆಪಿಎಸ್‌ಸಿ ನೀಡಿರುವ ಮಾಹಿತಿಯ ಪ್ರಕಾರ, 2023-24ನೇ ಸಾಲಿನಲ್ಲಿ ವಿವಿಧ ಇಲಾಖೆಗಳ ಒಟ್ಟು 2,610 ಹುದ್ದೆಗಳ ನೇಮಕಾತಿಗೆ 18 ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಈ ಪೈಕಿ 1,349 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ರವಾನಿಸಲಾಗಿದೆ. ಉಳಿದ 1,261 ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಬಾಕಿ ಉಳಿದಿದೆ.

ಆದರೆ, ಈಗಾಗಲೇ ಅಂತಿಮ ಆಯ್ಕೆ ಪಟ್ಟಿ ಸಲ್ಲಿಕೆಯಾಗಿರುವ 1,349 ಹುದ್ದೆಗಳಿಗೂ ಹೈಕೋರ್ಟ್ ಆದೇಶ ಅನ್ವಯವಾಗಲಿದೆ ಎಂದು ಆಯೋಗ ಸ್ಪಷ್ಟಪಡಿಸಿರುವುದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಅಂದರೆ, ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ನೇಮಕಾತಿ ಪ್ರಕ್ರಿಯೆ ಮುಂದಿನ ಹಂತಕ್ಕೆ ಸಾಗುವುದು ನ್ಯಾಯಾಲಯದ ಆದೇಶದ ಪರಿಣಾಮ ಹಾಗೂ ಸರ್ಕಾರದ ಮುಂದಿನ ನಿರ್ಧಾರವನ್ನು ಅವಲಂಬಿಸಿದೆ.

ಯಾವ ಇಲಾಖೆಗಳ ನೇಮಕಾತಿಗೆ ಸ್ಥಗಿತ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 384 ಹುದ್ದೆಗಳು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ ಎ, ಬಿ ಹಾಗೂ ಕಲ್ಯಾಣ ಕರ್ನಾಟಕ ವೃಂದದ 112 ಹುದ್ದೆಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು ಮತ್ತು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ 21 ಹುದ್ದೆಗಳು ನೇಮಕಾತಿ ಪ್ರಕ್ರಿಯೆಯಲ್ಲಿದ್ದವು.

ಇದರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಹಾಯಕ ಎಂಜಿನಿಯರ್ (ಸಿವಿಲ್) ವಿಭಾಗದ 92 ಹುದ್ದೆಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ 50 ಹುದ್ದೆಗಳು ಸೇರಿ ವಿವಿಧ ಇಲಾಖೆಗಳ ಒಟ್ಟು 2,610 ಹುದ್ದೆಗಳ ನೇಮಕಾತಿಗೆ ತಡೆಯಾಗಿದೆ.

ಕೆಇಎ ಪಾಲಾಗಲಿವೆಯೇ ನೇಮಕಾತಿ?

ಕೆಪಿಎಸ್‌ಸಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ದೀರ್ಘಕಾಲ ಸ್ಥಗಿತಗೊಂಡರೆ ಕೆಲವು ಇಲಾಖೆಗಳ ನೇರ ನೇಮಕಾತಿಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಹಳೆಯ ಮೀಸಲಾತಿ ಪದ್ಧತಿಯಡಿ ನೇಮಕಾತಿ ಮುಂದುವರಿಸುವುದೇ ಅಥವಾ ಪರಿಷ್ಕೃತ ಮೀಸಲಾತಿ ವ್ಯವಸ್ಥೆಗೆ ಅನುಗುಣವಾಗಿ ಹೊಸದಾಗಿ ರೋಸ್ಟರ್ ಬಿಂದುಗಳನ್ನು ಗುರುತಿಸಿ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಆಯ್ಕೆ ಪ್ರಕ್ರಿಯೆ ನಡೆಸುವುದೇ ಎಂಬುದರ ಕುರಿತು ಚರ್ಚೆಯಾಗುತ್ತಿದೆ. ನ್ಯಾಯಾಲಯದಲ್ಲಿ ಒಳಮೀಸಲಾತಿ ವಿವಾದದ ಇತ್ಯರ್ಥ ವಿಳಂಬವಾದರೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಇಲಾಖೆಗಳು ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಕೆಲವು ನೇಮಕಾತಿಗಳನ್ನು ಕೆಇಎಗೆ ವಹಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಅಭ್ಯರ್ಥಿಗಳಲ್ಲಿ ಹೆಚ್ಚಿದ ಆತಂಕ

ಒಂದು ಕಡೆ ವರ್ಷಗಟ್ಟಲೆ ಅಧ್ಯಯನ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಫಲಿತಾಂಶ ಹಾಗೂ ನೇಮಕಾತಿಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೂ ನೇಮಕಾತಿ ಆದೇಶ ಸಿಗುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ವಿಶೇಷವಾಗಿ ಆಯ್ಕೆ ಪಟ್ಟಿ ಪ್ರಕಟವಾಗಿರುವ 1,349 ಹುದ್ದೆಗಳ ಅಭ್ಯರ್ಥಿಗಳ ಭವಿಷ್ಯವೂ ನ್ಯಾಯಾಲಯದ ಆದೇಶದ ಪರಿಣಾಮವಾಗಿ ಅತಂತ್ರವಾಗಿದೆ. ಹೀಗಾಗಿ ಸರ್ಕಾರ ಮತ್ತು ಕೆಪಿಎಸ್‌ಸಿ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದರ ಮೇಲೆ 2,610 ಹುದ್ದೆಗಳ ನೇಮಕಾತಿಯ ಭವಿಷ್ಯ ನಿರ್ಧಾರವಾಗಲಿದೆ.