ವಿಜಯಪುರದ ಹಳೇ ನಾಡಕಚೇರಿ ಎದುರಿನ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಪುರಸಭೆ ಮುಂಭಾಗ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. 
ರಾಜ್ಯ

ಬೀದಿಬದಿ ವ್ಯಾಪಾರಕ್ಕೆ ತಾತ್ಕಾಲಿಕ ವ್ಯವಸ್ಥೆ / VIJAYAPUR

ವಿಜಯಪುರ : ಜನರ ಓಡಾಡ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಕ್ರಮವಹಿಸುವ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದುರ್ಗಾತಾಯಿ ಕಾಲನಿಯಲ್ಲಿ ಸಂತೆ ನಡೆಸಲು ಪುರಸಭೆಯಿಂದಲೇ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧ್ಯೆ ಭವ್ಯಾ ಮಹೇಶ್​ ಭರವಸೆ ನೀಡಿದರು.
ಪಟ್ಟಣದ ಹಳೇ ನಾಡಕಚೇರಿ ಮುಂಭಾಗದ ಬೀದಿಬದಿ ಅಂಗಡಿಗಳನ್ನು ಯಾವುದೇ ಮುನ್ಸೂಚನೆ, ನೋಟಿಸ್​ ನೀಡದೆ ತೆರವುಗೊಳಿಸಿ ತಳ್ಳು ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ವ್ಯಾಪಾರಿಗಳು ಸೋಮವಾರ ಪುರಸಭೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಆಲಿಸಿದ ಅಧ್ಯಕ್ಷರು, ಪಟ್ಟಣದಲ್ಲಿ ಸುಗಮ ಸಂಚಾರಕ್ಕಾಗಿ ಒತ್ತುವರಿ ತೆರವುಗೊಳಿಸಲಾಗಿದ್ದು, ವ್ಯಾಪಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪುರಸಭೆ ನಿಗದಿಪಡಿಸುವ ಸ್ಥಳದಲ್ಲಿ ಪ್ರತಿ ಶುಕ್ರವಾರ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಜನ ಬರಲ್ಲ: ನೀವು ಸೂಚಿಸಿದ ಜಾಗಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ಇದರಿಂದ ವ್ಯಾಪಾರಕ್ಕೆ ಹೆಚ್ಚು ನಷ್ಟ. ತೆರವುಗೊಳಿಸಿದ ಜಾಗದಲ್ಲೇ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವ್ಯಾಪಾರಿಗಳು ಪಟ್ಟು ಹಿಡಿದರು. ಬೆಳಗ್ಗೆ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸಿ ಸಂಜೆ ಮನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದೂ ವ್ಯಾಪಾರಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ನಂದಕುಮಾರ್​, ಹಳೇ ನಾಡಕಚೇರಿ ಮುಂಭಾಗದ ರಸ್ತೆ ಹಳ್ಳ ಗುಂಡಿಗಳಿಂದ ತುಂಬಿದ್ದು, ಡಾಂಬರೀಕರಣ ಹಾಕಬೇಕಿದೆ. ತೆರವುಗೊಳಿಸಿದ ಜಾಗದಲ್ಲಿ ಅಂಗಡಿಗಳನ್ನು ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಒಂದುವಾರದಲ್ಲಿ ವ್ಯಾಪಾರಿಗಳ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಿಶೇಷ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಮುಖ್ಯಾಧಿಕಾರಿ ಸತ್ಯನಾರಾಯಣ್​, ಬಿಜೆಪಿ ಟೌನ್​ ಅಧ್ಯಕ್ಷ ವೆಂಕಟೇಶ ಪ್ರಭು, ಅಂಬೇಡ್ಕರ್​ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್​, ವ್ಯಾಪಾರಿಗಳಾದ ಮುನಿಕೃಷ್ಣ, ಹನುಮಂತಪ್ಪ, ಮಂಜುನಾಥ್​, ಅನಿತಾ, ಕಮಲಮ್ಮ, ಕಲಾವತಿ, ಜಯಮ್ಮ, ಹರೀಶ್​, ಪದ್ಮಾ, ದೇವಮ್ಮ, ಮಣಿಕಂಠ, ರಾಮಾಂಜಿ, ಕೃಷ್ಣಪ್ಪ, ದೇವಮ್ಮ ಇದ್ದರು.