ಚಂದ್ರಗ್ರಹಣ 
ರಾಜ್ಯ

ಗ್ರಹಣ ಹಿನ್ನೆಲೆ ದೇವಾಲಯಗಳು ಬಂದ್

ಬೆಳಗಾವಿ: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ನಗರ ಹಾಗೂ ಜಿಲ್ಲಾದ್ಯಂತ ಜನರು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸಿದರು.
ಗ್ರಹಣ ಹಿನ್ನೆಲೆಯಲ್ಲಿ ನಗರ ಹೊರತುಪಡಿಸಿ ಬಹುತೇಕ ಭಾಗದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ನಗರದಲ್ಲಿ ಬೆಳಗ್ಗೆ 10ರೊಳಗೆ ಅಶ್ವತ್ಥಾಮ ದೇವಸ್ಥಾನದ ಉರುಳು ಸೇವೆ, ಚವಾಟಗಲ್ಲಿ ದೇವಸ್ಥಾನದ ಪ್ರಮುಖ ಹೋಳಿ ಪೂಜಾ ಕಾರ್ಯ ಕೈಗೊಳ್ಳಲಾಯಿತು. ಮಧ್ಯಾಹ್ನ 11ರ ನಂತರ ಹೋಳಿ, ಧಾರ್ಮಿಕ ಆಚರಣೆ ನಡೆಯಲಿಲ್ಲ.
ಕಪಿಲೇಶ್ವರ ದೇವಸ್ಥಾನದಲ್ಲಿನ ಶಿವಲಿಂಗ ಸಹಿತ ಎಲ್ಲ ದೇವರ ಮೂರ್ತಿಗಳನ್ನು ಬೆಳಗ್ಗೆ 11ರ ಹೊತ್ತಿಗೆ ವಿಶೇಷ ಪೂಜೆ ಕೈಗೊಂಡು, ಬಿಲ್ವಪತ್ರೆ ಮತ್ತು ಶ್ವೇತವರ್ಣದ ಬಟ್ಟೆಯಿಂದ ಮುಚ್ಚಿಡಲಾಗಿತ್ತು. ಇದೇ ರೀತಿ ಅನೇಕ ದೇವಸ್ಥಾನಗಳಲ್ಲಿ ಮೂರ್ತಿಗಳನ್ನು ಶ್ವೇತ ಬಟ್ಟೆಯಲ್ಲಿ ಸುತ್ತಿ ಬಾಗಿಲು ಹಾಕಲಾಗಿತ್ತು. ಸಂಜೆ 6.30ರ ನಂತರ ಬೀಗ ತೆರೆದು, ಶುದ್ಧಿ ಕಾರ್ಯ ಕೈಗೊಂಡು, ಪೂಜಾ ವಿಧಿ-ವಿಧಾನ ಕೈಗೊಳ್ಳಲಾಯಿತು.
ಕಪಿಲೇಶ್ವರ ಮಂದಿರದಲ್ಲಿ ಗ್ರಹಣ ದೋಷ ಹಾಗೂ ಜನ್ಮರಾಶಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಹೋಮ ನೆರವೇರಿಸಲಾಯಿತು. ಉಗರಗೋಳ ವರದಿ: ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆ 6.30ರವರೆಗೆ ದೇವಿ ದರ್ಶನ ಮತ್ತು ತೀರ್ಥ ಪ್ರಸಾದ ವಿತರಣೆ ಬಂದ್ ಮಾಡಲಾಗಿತ್ತು.
ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು, ಬೆಳಗ್ಗೆಯೇ ದೇವಿ ದರ್ಶನ ಪಡೆದರು. ಸಂಜೆ 6.40ರ ನಂತರ ದೇವಸ್ಥಾನ ಶುದ್ಧೀಕರಣಗೊಳಿಸಿ, ವಿಶೇಷ ಪೂಜೆ ನೆರವೇರಿಸಿದ ನಂತರ ಪುನಃ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.