ರಾಮಾಂಜನೇಯ ಗುಡ್ಡದ ದೇವಾಲಯದಲ್ಲಿ ವಿಶೇಷ ಅಲಂಕಾರ  
ರಾಜ್ಯ

ಹನುಮದ್ ವ್ರತಕ್ಕೆ ಸಜ್ಜಾಗಿವೆ ದೇವಾಲಯಗಳು

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • ಹನುಮದ್ ವ್ರತಕ್ಕೆ ನಗರದ ದೇವಾಲಯಗಳು ಸಜ್ಜು
  • ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
  • ರಾಮಾಂಜನೇಯ ಗುಡ್ಡದಲ್ಲಿ ಸಂಜೆ ಪಲ್ಲಕ್ಕಿ ಉತ್ಸವ
ಬೆಂಗಳೂರು: ವಿಶ್ವಾವಸು ಸಂವತ್ಸರ ಮಾರ್ಗಶಿರ ಮಾಸ ಶುಕ್ಲ ಪಕ್ಷದ ದ್ವಾದಶಿ ದಿನವಾದ ಮಂಗಳವಾರ (ಡಿ. 2) ಹನುಮದ್ ವ್ರತ ಅಂಗವಾಗಿ ನಗರದ ಶ್ರೀರಾಮ ದೇವಾಲಯ ಹಾಗೂ ಹನುಮ ದೇವಾಲಯಗಳು ತಳಿರುತೋರಣಗಳಿಂದ ಅಲಂಕೃತಗೊಂಡಿದ್ದು, ವಿಶೇಷ ರೀತಿಯಲ್ಲಿ ಪೂಜೆಗೆ ಸಜ್ಜಾಗಿವೆ.
ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯೇ ಸ್ವಾಮಿಗೆ ಅಭಿಷೇಕ, ಪೂಜೆ ನಡೆಯಲಿದ್ದು, ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತಿದೆ. ದೇವಾಲಯದಲ್ಲಿ ಆಂಜನೇಯಸಹಿತ ಶ್ರೀರಾಮ- ಸೀತೆ ಪರಿವಾರ ಗುಡಿ ಇದ್ದು, ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯವು ವಿಶೇಷ ರೀತಿಯಲ್ಲಿ ಹೂವಿನಿಂದ ಅಲಂಕಾರಗೊಂಡಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಸಂಗೀತ ಭಜನೆ:

ಕೊಡಿಗೇಹಳ್ಳಿಯ ಶ್ರೀ ಗುಂಡಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ವೃತ ಮಹೋತ್ಸವಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ, ದಿವ್ಯಾಲಂಕಾರ, ಮಹಾನಿವೇದನ, ಬಲಿಹರಣ, ಮಂತ್ರ ಪುಷ್ಪ ರಾಷ್ಟ್ರಾಶೀರ್ವಾದ, ದಿವ್ಯಾಲಂಕಾರಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ. ಹನುಮಜಯಂತಿ ಪ್ರಯುಕ್ತ ಮಂಗಳವಾದ್ಯ ಹಾಗೂ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಿವಿಧೆಡೆ ವಿಶೇಷ ಪೂಜೆ

ಹನುಮಂತನಗರದ ಶ್ರೀ ಗುಡ್ಡದಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯೇ ಅಭಿಷೇಕ, ಪೂಜೆ ಹಾಗೂ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯಲಿದ್ದು, ಸಂಜೆ ಪಲ್ಲಕ್ಕಿ ಉತ್ಸವ ಸಹ ಜರುಗಲಿದೆ. ಕೆ.ಆರ್. ಮಾರುಕಟ್ಟೆಯ ಕೋಟೆ ಆಂಜನೇಯ ದೇವಾಲಯ, ಚಾಮರಾಜಪೇಟೆಯ ಮಿಂಟೋ ಆಂಜನೇಯಸ್ವಾಮಿ ದೇವಾಲಯ, ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ದೇವಾಲಯ, ಬಳೇಪೇಟೆಯ ಪಿಳ್ಳಾಂಜನೇಯ ದೇವಾಲಯ, ಆರ್. ಟಿ. ಸ್ಟ್ರೀಟ್‌ನ ತುಪ್ಪದ ಆಂಜನೇಯ ಸ್ವಾಮಿ ದೇವಾಲಯ, ಬೇಗೂರಿನ ವೀರಾಂಜನೇಯ, ಚಾಮರಾಜಪೇಟೆಯ ಕರೆಕಲ್ಲು ಆಂಜನೇಯ ದೇವಾಲಯ, ಮೈಸೂರು ಬ್ಯಾಂಕ್ ವೃತ್ತದ ಯಲಹಂಕ ಗೇಟ್ ಆಂಜನೇಯ ಸ್ವಾಮಿ ದೇವಾಲಯ, ಮಹಾಲಕ್ಷ್ಮೀ ಲೇಔಟ್‌ನ ಶ್ರೀ ಪ್ರಸನ್ನ ವೀರಾಂಜನೇ ಸ್ವಾಮಿ ದೇವಾಲಯ ಸೇರಿ ನಗರದ ಹನುಮಂತ ದೇವಾಲಯಗಳಲ್ಲಿ ದಿನಪೂರ್ತಿ ವಿಶೇಷ ಪೂಜೆ ನಡೆಯಲಿದೆ