ಅರೇಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ, ನೂತನ ದೇವಾಲಯದ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ರಂಗೋಲಿ ಲೋಕೇಶ್, ಹನುಮೇಗೌಡ, ಪ್ರೇಮ್ ಕುಮಾರ್, ಚಿಕ್ಕಹನುಮೇಗೌಡ, ಮಹೇಶ್ ಇತರರು ಇದ್ದರು. 
ರಾಜ್ಯ

ದೇಗುಲಗಳು ಸಂಸ್ಕೃತಿಯ ಪ್ರತಿಬಿಂಬ

ಕೆ.ಎಂ.ದೊಡ್ಡಿ: ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಇದರಿಂದ ಗ್ರಾಮಗಳಲ್ಲಿ ಶಾಂತಿ ಸೌರ್ಹದತೆ ನೆಲೆಸಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಅರೇಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ನೂತನ ದೇವಾಲಯದ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಜನರು ಭಯ, ಭಕ್ತಿಯಿಂದ ಜೀವನ ನಡೆಸುತ್ತಾರೆ. ಅಲ್ಲದೆ ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ, ಶಿಸ್ತು, ಸಂಯಮ, ಮಾತೃಭಾವನೆ ಕಲಿಸುವ ದೇವಾಲಯಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿರಬೇಕು. ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದರು.

ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳಿದ್ದರೆ, ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನದಿಂದ ಕೂಡಿರುತ್ತದೆ. ನಮ್ಮ ಹಿರಿಯರ ಸಂಪ್ರದಾಯವನ್ನು ಇಂದಿನ ಯುವ ಜನತೆ ಪಾಲಿಸಬೇಕು. ನಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ದಾನ ನೀಡುವುದರಿಂದ ಘನತೆ ಜತೆಗೆ ಜೀವನದಲ್ಲಿ ಯಶಸ್ಸು ಸಿಕ್ಕಿ ಮೋಕ್ಷ ಸಿಗಲಿದೆ ಎಂದರು.

ದೇವಾಲಯಕ್ಕೆ ಶಾಸಕ ಕದಲೂರು ಉದಯ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮತ್ತಿತರು ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ರಂಗೋಲಿ ಲೋಕೇಶ್, ಹನುಮೇಗೌಡ, ಪ್ರೇಮ್ ಕುಮಾರ್, ಚಿಕ್ಕಹನುಮೇಗೌಡ, ಮಹೇಶ್, ಮಹೇಂದ್ರ, ಪ್ರೀತಮ್ ಗೌಡ, ಶಿವಲಿಂಗೇಗೌಡ, ಜವರಾಯಿಗೌಡ, ಶಿವಶಂಕರ್ ಇತರರು ಇದ್ದರು.