ನೆಲಮಂಗಲ ತಾಲೂಕಿನ ಓಬಳಾಪುರದ ಗಂಗಸಂದ್ರಮ್ಮ ದೇವಸ್ಥಾನದ ಜೀಣೋರ್ದ್ಧಾರ, ಮುಖ್ಯದ್ವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಗಂಗಸಂದ್ರಮ್ಮದೇವಿ ಟ್ರಸ್ಟ್​ ಅಧ್ಯಕ್ಷ ಎಲ್​.ನಟರಾಜು, ಕಾರ್ಯದರ್ಶಿ ಮುಪ್ಪಡಿಗಟ್ಟ ಕೆಂಪೇಗೌಡ ಇದ್ದರು.  
ರಾಜ್ಯ

ಮನುಷ್ಯನ ನೆಮ್ಮದಿ ತಾಣ ದೇಗುಲಗಳು / TYAMAGONDLU

ತ್ಯಾಮಗೊಂಡ್ಲು : ಮನುಷ್ಯನಿಗೆ ಎಷ್ಟೇ ಒತ್ತಡವಿದ್ದರೂ ಒಂದು ಬಾರಿ ದೇವಾಲಯಕ್ಕೆ ಹೋಗಿ ಕೆಲ ಸಮಯ ಕಳೆದರೆ ಅಲ್ಲಿ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ. ಸಮಾಜದಲ್ಲಿ ಧರ್ಮ ಶಾಶ್ವತ. ಅಧರ್ಮದಿಂದ ತಾತ್ಕಾಲಿಕವಾಗಿ ಅಲ್ಪಶಾಂತಿ ದೊರೆಯುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ ಹೇಳಿದರು.
ನೆಲಮಂಗಲ ತಾಲೂಕಿನ ಓಬಳಾಪುರದಲ್ಲಿ ಬುಧವಾರ ಗಂಗಸಂದ್ರಮ್ಮ ದೇವಸ್ಥಾನದ ಜೀಣೋರ್ದ್ಧಾರ, ವಿಮಾನಗೋಪುರ, ರಾಜಗೋಪುರ ಹಾಗೂ ದೇವಸ್ಥಾನದ ಮುಖ್ಯದ್ವಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಭಕ್ತಿ ಶ್ರದ್ಧೆಯಿಂದ ಭಗವಂತನನ್ನು ಸ್ಮರಿಸಬೇಕು. ದೇವಾಲಯಗಳು ನೆಮ್ಮದಿಯ ಕೇಂದ್ರಗಳಾಗಿವೆ. ಅಧರ್ಮದ ಹಿಂದೆ ಹೋದರೆ ಅಶಾಂತಿಯ ಜತೆಗೆ ಜೀವನವೇ ಡೋಲಾಯಮಾನವಾಗುತ್ತದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಧರ್ಮದತ್ತ ನಡೆದಾಗ ಮಾತ್ರ ಜೀವನ ಸಾರ್ಥಕ ಎಂದರು.
ಶಿವಗಂಗೆ ಮೇಲಣಗವಿ ಮಠದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶ್ರೀಮಂತರಿಗೆ ಕೊರತೆ ಇಲ್ಲ, ಆದರೆ, ದಾನಿಗಳಿಗೆ ಕೊರತೆ ಇದೆ. ಮರ ಬೆಳೆಯಲು ಕಾಂಡಕ್ಕೆ ನೀರು ಹಾಕಬೇಕಿಲ್ಲ. ಅದರ ಬೇರಿಗೆ ನೀರು ಕೊಟ್ಟರೂ ಸಾಕು, ಅದು ಬೆಳೆಯುತ್ತದೆ. ಅದರಂತೆ ಅಗತ್ಯವಿರುವವರಿಗೆ ಅನ್ನದಾನದ ಮಾಡಿದರೆ ಸಾಕು ಅದು ಭಗವಂತನಿಗೆ ತಲುಪುತ್ತದೆ ಎಂದು ಹೇಳಿದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಗ್ರಾಮಗಳಲ್ಲಿ ನೆಮ್ಮದಿ, ಶಾಂತಿ, ಪರಸ್ಪರ ನಂಬಿಕೆ ಉಂಟಾಗಲು ದೇವಾಲಯಗಳು ಪ್ರಮುಖ ಕಾರಣವಾಗಿರುತ್ತವೆ. ಎಲ್ಲರೂ ಒಂದೇಡೆ ಸೇರಿ ಭಗವಂತನ ನಾಮಸ್ಮರಣೆ ಮಾಡುವುದರಿಂದ ಎಲ್ಲರೂ ಒಂದೇ ಎಂಬ ಭಾವನೆ ಉಂಟಾಗುತ್ತದೆ. ದಾನಿಗಳ ಸಹಕಾರದಿಂದ ಗಂಗಸಂದ್ರಮ್ಮ ದೇವಸ್ಥಾನ ಸುಸಜ್ಜಿತ ದೇವಾಲಯವಾಗಿದೆ. ಹಿರಿಯರು ಧಾರ್ಮಿಕ ಕಾರ್ಯಗಳಿಗೆ ಮಹತ್ವ ನೀಡಿದ್ದರು. ಆದ್ದರಿಂದ ಪ್ರತಿ ಮನೆಯಲ್ಲೂ ಸಂಸತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಪಕ್ಷಾತಿತವಾಗಿ ದೇವಾಲಯದ ಜೀಣೋರ್ದ್ಧಾರವಾಗಿದೆ. ಗ್ರಾಮಗಳಲ್ಲಿ ವೈಯುಕ್ತಿಕ ದ್ವೇಷ, ಅಸೂಯೆ ಬಿಟ್ಟು ಪ್ರಗತಿಯತ್ತ ಸಾಗಬೇಕಿದೆ ಎಂದರು.ವಿಮಾನಗೋಪುರ ಮತ್ತು ರಾಜಗೋಪುರ ಕಲಶಗಳಿಗೆ ಕುಂಬಾಭಿಷೇಕ ನಡೆಸಲಾಯಿತು. ರಾಜಗೋಪುರ ನಿಮಾರ್ಣದ ದಾನಿಗಳಾದ ದೊಡ್ಮನೆ ವೆಂಕಟೇಶ್​ ಮತ್ತು ದೇವಾಲಯದ ಪ್ರಾಂಗಣದ ಸ್ಥಳದಾನಿಗಳನ್ನು ಸನ್ಮಾನಿಸಲಾಯಿತು.
ಸದಸ್ಯರಾದ ಶಿವರಾಜು, ನರಸಿಂಹರಾಜು, ಪಿ.ಹನುಮಂತಪ್ಪ, ಟಿ.ರಂಗಸ್ವಾಮಿ, ವಸಂತಪುರ ರಾಮಣ್ಣ, ರವಿಕುಮಾರ್​, ಅರುಣ್​ಕುಮಾರ್​, ಎಲ್​. ಹನುಮಂತರಾಜು, ಜಯರಾಮ್​, ಮೋಹನ್​ಕುಮಾರ್​, ನಾರಾಯಣ್​ಗೌಡ, ಮುಖಂಡರು ಇತರರು ಇದ್ದರು.