ಬೆಂಗಳೂರು: ಚಳಿಗಾಲ ಮುಗಿದು ಬೇಸಿಗೆಗಾಲಕ್ಕೆ ಅಣಿಯಾಗುತ್ತಿರುವ ರಾಜ್ಯದ ಜನರಿಗೆ ಆರಂಭದಲ್ಲೇ ಬಿಸಿಲಿನ ತಾಪ ಎದರಿಸುವಂತಾಗಿದೆ.
ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಸೇರಿ ಕರಾವಳಿ ವ್ಯಾಪ್ತಿಯ ಭೌಗೋಳಿಕ ಪ್ರದೇಶಗಳಲ್ಲಿ ಈಗಾಗಲೇ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಹೆಚ್ಚಳವಾಗಿದೆ. ಇದು ಬೇಸಿಗೆ ಆರಂಭಕ್ಕೆ ಮುನ್ಸೂಚನೆಯಾಗಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳುತ್ತಾರೆ.
ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವ್ಯಾಪ್ತಿಯ ಪ್ರದೇಶಗಳಲ್ಲಿ ಗರಿಷ್ಠ, ಕನಿಷ್ಠ ತಾಪಮಾನದಲ್ಲಿ ಸದ್ಯ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ. ಫೆ.15ರಿಂದ ಆ ಭಾಗದಲ್ಲಿ ಉಷ್ಣಾಂಶ ಏರಿಕೆಯಾಗಲಿದೆ. ಬಳಿಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅಧಿಕ ತಾಪಮಾನ ವರದಿಯಾಗಲಿದೆ.
ಹವಾಮಾನ ಇಲಾಖೆಯ ಅನ್ವಯ ಫೆ.15ರಿಂದ ಆರಂಭವಾಗುವ ಬೇಸಿಗೆ ಮೇ.31ವರೆಗೆ ಇರಲಿದೆ. ಆದರೆ, ವಾಡಿಕೆಗಿಂತ ಮುನ್ನವೇ ರಾಜ್ಯದಲ್ಲಿ ನಿಧಾನವಾಗಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಬಿಸಿಲಿನ ಝಳ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು. ರಾಜ್ಯದ ಹಲವೆಡೆ ದಿನದಿಂದ ದಿನಕ್ಕೆ ಚಳಿ ಕಡಿಮೆಯಾಗುತ್ತಿದೆ. ರಾತ್ರಿ ವೇಳೆ ಜನರಿಗೆ ಥಂಡಿ ಅನುಭವವಾಗುತ್ತಿಲ್ಲ.
ಕೆಲ ಪ್ರದೇಶಗಳಲ್ಲಿ ಮಾತ್ರ ಬೆಳಗ್ಗಿನ ಜಾವದಲ್ಲಿ ಮಂಜು ಬೀಳುತ್ತಿದೆ. ಸದ್ಯ ಶುಷ್ಕ ವಾತಾವರಣ ಕಾಣಿಸಿಕೊಳ್ಳುತ್ತಿದೆ. ಪ್ರಸ್ತುತ ತಿಂಗಳ ಕೊನೆಯ ವಾರದಲ್ಲಿ ಕರ್ನಾಟಕ ಸೇರಿ ದೇಶಾದ್ಯಂತ ಬಿಸಿಲಿನ ವಾತಾವರಣ ಹೇಗೆ ಇರಲಿದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆ( ಐಎಂಡಿ ) ವರದಿ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.