ಉಷ್ಣಾಂಶ ತುಸು ಏರಿಕೆ 
ರಾಜ್ಯ

ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳ: ಬೆಂಗಳೂರಲ್ಲಿ ಕೆಂಡದಂತಹ ಬಿಸಿಲು-Temperature

ಬೆಂಗಳೂರು:  ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಸಿತವಾಗಿದ್ದ ಉಷ್ಣಾಂಶ ತುಸು ಏರಿಕೆಯಾಗಿದೆ.  ಕರಾವಳಿ ಕರ್ನಾಟಕ ವ್ಯಾಪ್ತಿಯ ಭೌಗೋಳಿಕ ಪ್ರದೇಶಗಳಲ್ಲಿ ಏ.12ರವರೆಗೆ ಬಿಸಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕಲಬುರಗಿಯಲ್ಲಿ ಗುರುವಾರ ಗರಿಷ್ಠ ತಾಪಮಾನದಲ್ಲಿ 39.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಮೈಸೂರು ಮತ್ತು ಮಂಡ್ಯ ಸೇರಿ ರಾಜ್ಯದ ಕೆಲ ಭಾಗಗಳಲ್ಲಿ ವಾಡಿಗೆಗಿಂತ  2-3 ಡಿ.ಸೆ. ಉಷ್ಣಾಂಶ ಹೆಚ್ಚಳವಾಗಿದ್ದು, ಇದರಿಂದಾಗಿ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದಾರೆ. 
ರಾಜ್ಯದಲ್ಲಿ ಒಂದೆರೆಡು ಜಿಲ್ಲೆ ಹೊರುತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದ್ದರೂ ಬೆಳಗ್ಗೆಯಿಂದಲೇ ಉರಿ ಬಿಸಿಲಿನ ಅನುಭವಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇದುವರೆಗೆ 35-36 ಡಿ.ಸೆ. ದಾಖಲಾಗುತ್ತಿದ್ದ ಉಷ್ಣಾಂಶ 40 ಡಿ.ಸೆ.ಸಮೀಪ ವರದಿಯಾಗುತ್ತಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಕರೆ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಬರಿದಾಗುತ್ತಿದೆ. ರಾಜ್ಯದಲ್ಲಿ ಮುಂದಿನ 5 ದಿನ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ ಎಂದು ಇಲಾಖೆ ಹೇಳಿದೆ. 
ಬೆಂಗಳೂರಲ್ಲಿ ಉಷ್ಣಾಂಶ ಹೆಚ್ಚಳ: ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಳವಾಗಿದೆ. ಪ್ರಸ್ತುತ ದಿನಗಳಲ್ಲಿ ವಾಡಿಕೆಯಂತೆ 33.2 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, 35.2 ಡಿ.ಸೆ.ಉಷ್ಣಾಂಶ ದಾಖಲಾಗುತ್ತಿದ್ದು, ವಾಡಿಕೆಗಿಂತ 2 ಡಿ.ಸೆ.ಅಧಿಕವಾಗಿದೆ. ಕನಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 35 ಡಿ.ಸೆ.ಮತ್ತು 24 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ.
ಕಾಡ್ಗಿಚ್ಚು ಆತಂಕ: ದಿನೇದಿನೆ ಬಿಸಿಲು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಕಾಡ್ಗಿಚ್ಚು ಆತಂಕ ಎದುರಾಗಿದೆ. ರಾಜ್ಯದ ಕೆಲ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಆಕಸ್ಮಿಕ ಬೆಂಕಿ, ಕಾಡ್ಗಿಚ್ಚು ಘಟನೆಗಳು ನಡೆಯುತ್ತಿವೆ. ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಉಷ್ಣಾಂಶ ಹೆಚ್ಚಳವಾದರೆ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳು  ಹೆಚ್ಚಳವಾಗುವ ಸಾಧ್ಯತೆ ಇದೆ.