ಬಿಸಿಲಿನ ಝಳ 
ರಾಜ್ಯ

ರಾಜ್ಯದ ಹಲವೆಡೆ ಉಷ್ಣಾಂಶ ಹೆಚ್ಚಳ-temperature

ಬೆಂಗಳೂರು:ರಾಜ್ಯದ ಹಲವೆಡೆ ಉಷ್ಣಾಂಶ ಹೆಚ್ಚಳವಾಗಿದೆ. ಈ ಕಾರಣದಿಂದ ಪ್ರಸಕ್ತ ತಿಂಗಳಿನ ಮೊದಲ ವಾರದಲ್ಲೇ ಬಿಸಿಲಿನ ಝಳಕ್ಕೆ ಜನರು ಬೆಳಲಿ ಬೆಂಡಾಗಿದ್ದಾರೆ. 
ರಾತ್ರಿ ವೇಳೆ ಸೆಖೆಯ ಅನುಭವವಾಗುತ್ತಿದೆ.  ಬೆಂಗಳೂರು, ಮೈಸೂರು, ಕಲಬುರಗಿ,  ಬಳ್ಳಾರಿ, ದಾವಣಗೆರೆ, ಕೊಪ್ಪಳ, ಬೀದರ್, ಶಿವಮೊಗ್ಗ ಮತ್ತು ಕಾರವಾರ ಸೇರಿ ರಾಜ್ಯದ ಇತರ ಭಾಗಗಳಲ್ಲಿ ವಾಡಿಕೆಗಿಂತ 1-2 ಡಿ.ಸೆ. ಉಷ್ಣಾಂಶ ಅಧಿಕವಾಗಿದೆ.  
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಕಡಿಮೆ ಶಾಖದ ಅಲೆ ಮತ್ತು ಬೆಚ್ಚಗಿನ ರಾತ್ರಿ ಇರಲಿದೆ. ಮಾರ್ಚ್ ಆರಂಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಳವಾಗಲಿದೆ. ಕರಾವಳಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಶೇ.65 ಹೆಚ್ಚಲಿದೆ. ಬೆಂಗಳೂರು ನಗರ ಸೇರಿ ಕೆಲ ಜಿಲ್ಲೆಗಳಲ್ಲಿ  ರಾತ್ರಿ ವೇಳೆ ಬಿಸಿ ವಾತಾವರಣ ಇರಲಿದೆ.ಮಾರ್ಚ್‌ನಿಂದ ಮೇವರೆಗೆ ತಾಪಮಾನ ಸಾಮಾನ್ಯಗಿಂತ ಕಠಿಣವಾಗಿರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. 
ವಾಡಿಕೆಗಿಂತ 4-5 ಡಿ.ಸೆ. ಹೆಚ್ಚಳ:
ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ‘ಲಾ ನಿನಾ’ ತಗ್ಗುವುದು ಮತ್ತು ಒಣಗಾಳಿ ಬೀಸುವುದೂ ಸೇರಿ ಇತರ ಹವಾಮಾನ ವೈಪರೀತ್ಯ ಕಾರಣಗಳಿಂದ ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 4-5 ಡಿ. ಸೆ.ಉಷ್ಣಾಂಶ ಹೆಚ್ಚಳವಾಗಲಿದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಕಲಬುರಗಿಯಲ್ಲಿ ಅತಿ ಹೆಚ್ಚು 45 ಡಿ.ಸೆ.ವರೆಗೆ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ.
ವಿಜಯಪುರ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ, ಧಾರವಾಡ, ಯಾದಗಿರಿ, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 43 ಡಿ.ಸೆ. ಮತ್ತು  ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ತುಮಕೂರು, ಬೆಂ.ದಕ್ಷಿಣ, ಬೆಂ. ಗ್ರಾಮಾಂತರದಲ್ಲಿ 40 ಡಿ.ಸೆ.ವರೆಗೆ ಉಷ್ಣಾಂಶ ವರದಿಯಾಗಲಿದೆ.   ರಾಜಧಾನಿ ಬೆಂಗಳೂರಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಬಿಸಿಲು ಇರಲಿದೆ. 
ತಾಪಮಾನ ಹೆಚ್ಚಳದಿಂದ ಆಗುವ ಪರಿಣಾಮವೇನು?
* ಕೃಷಿ ಉತ್ಪಾದನೆಯಲ್ಲಿ ಗಣನೀಯ ಕುಂಠಿತ
* ವಿದ್ಯುತ್ ಕೊರತೆ
* ಕುಡಿಯುವ ನೀರಿಗೆ ಹಾಹಾಕಾರ
* ಮೂಲಸೌಕರ್ಯಕ್ಕೆ ಅಡ್ಡಿ 
* ಗಾಳಿಯ ಗುಣಮಟ್ಟ ಹದಗೆಡುವುದು
* ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಜೀವಕ್ಕೆ ಕಂಟಕ
* ಜನರಿಗೆ ಆರೋಗ್ಯ ಸಮಸ್ಯೆ 
* ನಿರ್ಜಲೀಕರಣ, ಹೀಟ್ ಸ್ಟ್ರೋಕ್‌ದಿಂದ ಸಾವು ಸಂಭವ 
ಯಾರು ಎಚ್ಚರವಹಿಸಬೇಕು:
* ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು
* ಆಟೋ ಚಾಲಕರು, ಸಂಚಾರ ಪೊಲೀಸರು
* ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು
* ಬಿಸಿಲಿನ ಪ್ರಖರತೆ ಇದ್ದಾಗ ವಯಸ್ಸಾದವರು ಹೊರಗಡೆ ಓಡಾಡಬಾರದು
* ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಬಾರದು
* ಹೊರಗಡೆ ತೆರಳುವಾಗ ಛತ್ರಿ, ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು
* ವಿಶೇಷವಾಗಿ ನಿರ್ಮಾಣ ಹಂತದ ಕಾಮಗಾರಿ ನಡೆಸಬಾರದು