9 ಜಿಲ್ಲೆಗಳಲ್ಲಿ 40 ಡಿ.ಸೆ.ದಾಟಿದ ಉಷ್ಣಾಂಶ
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಳವಾಗಿದ್ದು, 8-9 ಜಿಲ್ಲೆಗಳಲ್ಲಿ ಉಷ್ಣಾಂಶವೂ 40 ಡಿ.ಸೆ.ದಾಟಿದೆ.
ರಾಜ್ಯದ ಇತರ ಜಿಲ್ಲೆಗಳಗಿಂತ ಕಲಬುರಗಿಯಲ್ಲಿ ಅತಿ ಹೆಚ್ಚು 44 ಡಿ.ಸೆ.ಉಷ್ಣಾಂಶ ಬುಧವಾರ ದಾಖಲಾಗಿದೆ. ಈ ಜಿಲ್ಲೆಯ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 4.1 ಡಿ.ಸೆ. ಮತ್ತು ಕನಿಷ್ಠ ತಾಪಮಾನದಲ್ಲಿ 3.9 ಡಿ.ಸೆ.ಅಧಿಕವಾಗಿ ಕಂಡುಬಂದಿದೆ. ಚಿತ್ರದುರ್ಗ, ಧಾರವಾಡ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ತಲಾ 40 ಡಿ.ಸೆ.ವರದಿಯಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಗರಿಷ್ಠ, ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ. ಅಧಿಕವಾಗಿದೆ. ಇದರಿಂದಾಗಿ ಉರಿ ಬಿಸಿಲು ಮತ್ತು ಸೆಖೆಯಿಂದ ಜನರು ಬಸವಳಿಯುವಂತಾಗಿದೆ.
ಕರಾವಳಿ ಪ್ರದೇಶಗಳಲ್ಲಿ ದಾಖಲಾಗುತ್ತಿರುವ 34-36 ಡಿ.ಸೆ. ಉಷ್ಣಾಂಶವೂ ಉ,ಕರ್ನಾಟಕದ ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಬಿಸಿಲಿನ ತಾಪಕ್ಕೆ ಸಮವಾಗಿದೆ. ಆ ಪ್ರದೇಶಗಳಲ್ಲಿ ರಾತ್ರಿ ವೇಳೆ ಬಿಸಿ ವಾತಾವರಣ ಉಂಟಾಗಿದೆ. ಕೆಲ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಏ.16ರಿಂದ ಏ.20 ವರೆಗೆ ಶಾಖದ ಅಲೆ(ಹೀಟ್‌ವೇವ್) ಮುಂದುವರಿಯಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವುದನ್ನು ತಪ್ಪಿಸುವುದು ಒಳಿತು.
ರಾಜಧಾನಿಯಲ್ಲೂ ಸುಡು ಬಿಸಿಲು:
ರಾಜಧಾನಿ ಬೆಂಗಳೂರಿನಲ್ಲಿಯೂ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದೆ. ವಾಡಿಕೆಯಂತೆ 34.6 ಡಿ.ಸೆ. ಉಷ್ಣಾಂಶ ದಾಖಲಾಗಬೇಕಿತ್ತು. ಆದರೆ, ಪ್ರಸ್ತುತ ನಗರದಲ್ಲಿ 36.6 ಡಿ.ಸೆ.ಉಷ್ಣಾಂಶ ದಾಖಲಾಗಿದ್ದು, ವಾಡಿಕೆಗಿಂತ 2.6 ಡಿ.ಸೆ. ಅಧಿಕವಾಗಿ ಕಂಡುಬಂದಿದೆ. ಕನಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ 1.3 ಡಿ.ಸೆ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 37.2 ಡಿ.ಸೆ. ತಾಪಮಾನ ಇದ್ದು, ಮುಂದಿನ ದಿನಗಳಲ್ಲಿ 40ರ ಸಮೀಪ ಉಷ್ಣಾಂಶ ಕಂಡುಬರಲಿದೆ.
ರಾಜ್ಯದಲ್ಲಿ ಮೇ.15ವರೆಗೆ ಬಿಸಿಲಿನ ತಾಪ ಇರಲಿದೆ. ಸೂರ್ಯನ ಕಿರಣಗಳು ಭೂಮಿಯ ಮೇಲೆ ಬಿದ್ದಾಗ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತದೆ. ಕಪ್ಪು ಮತ್ತು ಕೆಂಪು ಆಧಾರಿತ ಭೂಮಿ ಮತ್ತು ಘಟ್ಟ ಪ್ರದೇಶಗಳಲ್ಲಿ ಒಂದೊಂದು ರೀತಿಯ ಬೆಚ್ಚಗಿನ ವಾತಾವರಣ ಇರಲಿದೆ. ಬಿಸಿಲು ಹೆಚ್ಚಳದಿಂದಾಗಿ ಅಂತರ್ಜಲ ಮಟ್ಟ ಕುಸಿತವಾಗಲಿದೆ. ಸೂರ್ಯನ ಶಾಖದಿಂದ ನದಿ, ಸಮುದ್ರ, ಅಣೆಕಟ್ಟು ಮತ್ತು ಮಣ್ಣಿನಲ್ಲಿರುವ ನೀರು ಆವಿಯಾಗಿ ವಾತಾವರಣ ಸೇರಲಿದೆ.ಬಿಸಿಲಿನ ವಾತಾವರಣ ವಿಪರೀತವಾದಾಗ ಮಳೆ ಸುರಿಯಲಿದೆ.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.