ಬೆಂಗಳೂರು: ಕನ್ನಡ ಹಾಗೂ ತಮಿಳು ಕಿರುತೆರೆಯ ಜನಪ್ರಿಯ ನಟಿ ನಂದಿನಿ ಸಿಎಂ (Nandini CM) ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ (RR Nagar) ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ, ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಿದ್ದರು. ಇಂದು (ಡಿಸೆಂಬರ್ 29) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ನಂದಿನಿ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಲಭ್ಯವಾಗಿದೆ.
ವರದಿಗಳ ಪ್ರಕಾರ, ಡೆತ್ ನೋಟ್‌ನಲ್ಲಿ ನಂದಿನಿ ಅವರು ಮದುವೆ ವಿಚಾರವಾಗಿ ಪೋಷಕರಿಂದ ಒತ್ತಡವಿತ್ತು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. "ನನಗೆ ಈಗಲೇ ಮದುವೆ ಇಷ್ಟವಿಲ್ಲ, ಆದರೆ ಪೋಷಕರು ಒತ್ತಾಯಿಸುತ್ತಿದ್ದಾರೆ" ಎಂದು ಬರೆದಿದ್ದಾರೆ ಎನ್ನಲಾಗಿದ್ದು, ಇದರೊಂದಿಗೆ ಖಿನ್ನತೆಯಿಂದಲೂ (Depression) ಬಳಲುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.