ಫೂರ್ಣಚಂದ್ರ ತೇಜಸ್ವಿ ಪರಿಚಯಿಸುವ ಫಲಪುಷ್ಪ ಪ್ರದರ್ಶನ
- ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ. 15ರಿಂದ 26ರವರೆಗೆ ಆಯೋಜನೆ
- ನಾಡು ಕಂಡ ಅನನ್ಯ ಸಾಹಿತಿಗೆ ತೋಟಗಾರಿಕೆ ಇಲಾಖೆ ಗೌರವ
- ತೇಜಸ್ವಿ ಅವರ ಜೀವನಗಾಥೆ ಹೂಹಣ್ಣುಗಳಲ್ಲಿ ಅನಾವರಣಗೊಳ್ಳಲಿದೆ
ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಜನವರಿಯಲ್ಲಿ ಆಯೋಜಿಸಲಾಗುವ 219ನೇ ಫಲಪುಷ್ಪ ಪ್ರದರ್ಶನದಲ್ಲಿ (ಜನವರಿ 15ರಿಂದ 26ರವರೆಗೆ) ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನಗಾಥೆ ಅನಾವರಣಗೊಳ್ಳಲಿದೆ.
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ವೇಳೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಇದರ ಮೂಲಕ ಮಹಾತ್ಮರು, ಮಹಾಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಕವಿ, ಸಾಹಿತಿ, ಸಂತರು, ಐತಿಹಾಸಿಕ ಸ್ಥಳಗಳು ಸೇರಿ ವಿಶೇಷ ವಿಷಯಗಳನ್ನು ಆಧರಿಸಿ ಲಪುಷ್ಪಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸಾಹಿತ್ಯ ಹಾಗೂ ಪರಿಸರವಿಜ್ಞಾನಕ್ಕೆ ವಿಶೇಷ ಕೊಡುಗೆ ನೀಡಿದ ತೇಜಸ್ವಿ ಅವರ ಬದುಕು ಮತ್ತು ಸಾಧನೆ ಈ ಬಾರಿಯ ಫಲ- ಪುಷ್ಪಗಳಲ್ಲಿ ಮೂಡಿಬರಲಿದೆ.
ಪ್ರದರ್ಶನ ಹಿನ್ನೆಲೆ ತೋಟಗಾರಿಕೆ ಇಲಾಖೆಯ ತಜ್ಞರ ಸಮಿತಿ ಮಂಗಳವಾರ ಮೊದಲ ಸುತ್ತಿನ ಸಭೆ ನಡೆಸಿದ್ದು, ಇದರಲ್ಲಿ 25 ತಜ್ಞರು ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ತೇಜಸ್ವಿ ಅವರ ಕುರಿತಾದ ಪ್ರದರ್ಶನ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಇನ್ನೂ ಹಲವು ಸುತ್ತಿನ ಸಭೆ ನಡೆಸಿ ಪ್ರದರ್ಶನದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಡು ಕಂಡ ಅನನ್ಯ ಪ್ರತಿಭೆ:
ರಾಷ್ಟ್ರಕವಿ ಕುವೆಂಪು ಅವರ ಪುತ್ರರಾಗಿ 1938ರ ಏ. 8ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಪೂರ್ಣಚಂದ್ರ ತೇಜಸ್ವಿ ಜನಿಸಿದರು. ನವ್ಯ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿ ಸ್ವತಂತ್ರ ಪ್ರವೃತ್ತಿಯ ಬರಹಗಾರರಾಗಿದ್ದರು. ‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯ ಪ್ರಾರಂಭಿಸಿದರು. ಸಣ್ಣಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ ಇವರ ಬರಹ ಶೈಲಿಯಾಗಿದ್ದು, ಪರಿಸರ ವಿಜ್ಞಾನ ಇವರ ಬರಹದ ಪ್ರಮುಖ ವಿಷಯವಾಗಿತ್ತು.
‘ಕರ್ವಾಲೋ’ ಕಾದಂಬರಿಯು ಜೀವವಿಕಾಸ ಪಥದಲ್ಲಿ ಕುತೂಹಲ ಹುಟ್ಟಿಸುವ ಬಹಳಷ್ಟು ಸನ್ನಿವೇಶನಗಳನ್ನು ಒಳಗೊಂಡಿವೆ. ಸ್ನಾತಕೋತ್ತರ ಪದವಿ ನಂತರ ವೃತ್ತಿ ಅರಸುವ ಬದಲು ಮೂಡಿಗೆರೆಯ ಹ್ಯಾಂಡ್‌ಪೋಸ್ಟ್‌ನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಅದರ ಜತೆಗೆ ಸಮೃದ್ಧ ಸಾಹಿತ್ಯ ಕೃಷಿಯನ್ನೂ ಮಾಡಿದರು. ರೈತ ಚಳವಳಿಯಲ್ಲಿಯೂ ಭಾಗಿಯಾಗಿದ್ದ ತೇಜಸ್ವಿ, ಪಕ್ಷಿ- ಕೀಟ- ಪ್ರಾಣಿಗಳ ಛಾಯಾಗ್ರಹಣದಲ್ಲೂ ತಮ್ಮ ಛಾಪು ಮೂಡಿಸಿದ್ದರು. ನೇರ- ನಿಷ್ಠುರ ಮಾತುಗಾರಿಕೆ ಹಾಗೂ ಪ್ರಖರ ವಿಚಾರಧಾರೆ ಕಾರಣಕ್ಕಾಗಿ ಈಗಲೂ ಬಹುಪಾಲು ಸಾಹಿತ್ಯಪ್ರಿಯರ ನೆಚ್ಚಿನ ಲೇಖಕರಾಗಿದ್ದಾರೆ. ಪುಷ್ಪಪ್ರದರ್ಶನದಲ್ಲಿ ಈ ಎಲ್ಲ ಅಂಶಗಳಿಗೆ ಪೂರಕವಾಗಿ ಕಲಾಕೃತಿ, ಮಾದರಿಗಳು ಅನಾವರಣಗೊಳ್ಳಿವೆ.
ತೇಜಸ್ವಿ ಅವರ ಬದುಕು- ಸಾಧನೆಯನ್ನು ಪರಿಚಯಿಸುವುದರ ಜತೆಗೆ ಪ್ರತಿ ವರ್ಷದಂತೆ ಇಕೆಬಾನ, ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಪ್ರದರ್ಶನವೂ ಇರಲಿದೆ. ತೋಟಗಾರಿಕೆಗೆ ಸಂಬಂಧಿಸಿದ ಕಾರ್ಯಾಗಾರ ಹಾಗೂ ಸ್ಪರ್ಧೆಗಳು ಇರಲಿವೆ.
ಬಹುಮುಖ ವ್ಯಕ್ತಿತ್ವದ ಪೂರ್ಣಚಂದ್ರ ತೇಜಸ್ವಿ ಅವರನ್ನು ಸಾಹಿತ್ಯ, ಪರಿಸರ, ವಿಜ್ಞಾನ ಒಳಗೊಂಡಂತೆ ವಿವಿಧ ಆಯಾಮಗಳಲ್ಲಿ ಲಪುಷ್ಪಗಳ ಮೂಲಕ ಪರಿಚಯಿಸಲಾಗುವುದು. ಈ ನಿಟ್ಟಿನಲ್ಲಿ ಪ್ರದರ್ಶನ ಯಾವ ರೀತಿ ಮೂಡಿಬರಬೇಕು ಎಂಬ ಬಗ್ಗೆ ಚಿಂತಕರು, ಸಾಹಿತಿಗಳು, ಕಲಾವಿದರ ಸಲಹೆ ಪಡೆಯಲು ನಿರ್ಧರಿಸಲಾಗಿದೆ.