ಶವವಾಗಿ ಪತ್ತೆಯಾದ ಬಾಲಕಿ ಶ್ರೀನಂದಾ (15)
- ಏ.07ರ ಮಂಗಳವಾರ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದ ಬಾಲಕಿ ನಾಪತ್ತೆ
- ಚಿಕ್ಕಮಗಳೂರಿನ ಚಂದ್ರದ್ರೋಣ ಬೆಟ್ಟದ ಪ್ರವಾಸದಲ್ಲಿ ದಿಢೀರ್ ಕಣ್ಮರೆಯಾದ ಶ್ರೀನಂದಾ
- ಮಗಳು ಮಿಸ್ ಆಗಿ ಅಥವಾ ಸ್ಲಿಪ್ ಆಗಿ ಬಿದ್ದಿಲ್ಲ ಎಂದು ಪೋಷಕರು ದೂರು
ಚಿಕ್ಕಮಗಳೂರು: ನಾಲ್ಕು ದಿನಗಳ ಹಿಂದೆ ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧಾರ ಪ್ರದೇಶದ ಸಮೀಪ ಸುಮಾರು 2 ಸಾವಿರ ಅಡಿಗಳಷ್ಟು ಆಳದ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವುದು ಸದ್ಯ ಪೋಷಕರ ಕಣ್ಣೀರಿಗೆ ಕಾರಣವಾಗಿದೆ. ಬಾಲಕಿ ಕಣ್ಮರೆಯಾದ ಬೆನ್ನಲ್ಲೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿತು. ಸತತ ನಾಲ್ಕು ದಿನಗಳ ಹುಡುಕಾಟದ ಬಳಿಕ ಈ ದುರಂತ ಬೆಳಕಿಗೆ ಬಂದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಮನಕಲಕುವ ದೃಶ್ಯಗಳು ಕಂಡುಬಂದಿವೆ. ಪ್ರವಾಸಕ್ಕೆ ಬಂದಿದ್ದಾಗಲೇ ಬಾಲಕಿ ನಾಪತ್ತೆಯಾಗಿದ್ದ ಹಿನ್ನೆಲೆ, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿ ಪ್ರಪಾತಕ್ಕೆ ಬಿದ್ದ ಕಾರಣ ಏನು? ಎಂಬುದನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲು ಮುಂದಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆದರೆ, ಬಾಲಕಿಯ ಪೋಷಕರು, ತಮ್ಮ ಮಗಳು ಸ್ಲಿಪ್ ಆಗಿ ಬಿದ್ದಿಲ್ಲ ಎಂದಿದ್ದಾರೆ.
'ಕೇರಳ ಕೌಮುಡಿ' ವರದಿ ಪ್ರಕಾರ, ಶ್ರೀನಂದ ಸಾವಿನಲ್ಲಿ ನಿಗೂಢತೆ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದು ಅಪಘಾತವಲ್ಲ, ತಮ್ಮ ಮಗಳು ಸ್ಲಿಪ್ ಆಗಿ ಪ್ರಪಾತಕ್ಕೆ ಬಿದ್ದಿಲ್ಲ ಎಂದಿದ್ದಾರೆ. ಪುತ್ರಿಯ ಕೈಯಲ್ಲಿ ಫೋನ್ ಇರಲಿಲ್ಲ. ಹೀಗಾಗಿ, ಫೋಟೋ ತೆಗೆದುಕೊಳ್ಳಲು ಬೆಟ್ಟದ ತುದಿಗಳಿಗೆ ಅವಳು ಹೋಗಿಲ್ಲ ಎಂಬುದು ಸ್ಪಷ್ಟ. ಕೇವಲ ಐದು ನಿಮಿಷಗಳಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರಿದ್ದಾಗಿ ವರದಿಯಾಗಿದೆ.
ಏನಿದು ಘಟನೆ?
ಮಂಗಳವಾರ (ಏ.07) ಸಂಜೆ 5:35ರ ಸುಮಾರಿಗೆ ತನ್ನ 40 ಮಂದಿಯ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದ ದಿಢೀರ್ ಕಣ್ಮರೆಯಾದರು ಎಂದು ವರದಿಯಾಗಿದೆ. ಸಂಜೆ 5:20ಕ್ಕೆ ಕುಟುಂಬದೊಂದಿಗೆ ತೆಗೆದ ಫೋಟೋದಲ್ಲಿದ್ದ ಬಾಲಕಿ, ಅದೇ 5:35ಕ್ಕೆ ನಾಪತ್ತೆ ಆಗಿದ್ದಾರೆ. ಇದು ಹೆತ್ತವರಲ್ಲಿ ಭಾರೀ ಆತಂಕ ಹಾಗೂ ಅನುಮಾನ ಮೂಡಿಸಿದೆ. ಆಕೆ ಕಾಣೆಯಾದ ಸ್ಥಳದಿಂದ ಸಿಸಿಟಿವಿ ಕ್ಯಾಮೆರಾಗಳು 10 ಕಿಲೋಮೀಟರ್ ದೂರದಲ್ಲಿದೆ. ಸದ್ಯ ತನಿಖೆ ಚುರುಕುಗೊಂಡಿದ್ದು, ಪೊಲೀಸರ ತನಿಖೆ ಏನು ಹೇಳಲಿದೆ? ಪೋಸ್ಟ್ಮಾರ್ಟಮ್ ವರದಿಯಲ್ಲಿ ಏನಿರಲಿದೆ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).