ಮೃತ ಶರ್ಮಿಳಾ ಡಿಕೆ ಮತ್ತು ಆರೋಪಿ ಕರ್ಣಲ್​ ಕುರಯ್ 
ರಾಜ್ಯ

34 ವರ್ಷದ ಟೆಕ್ಕಿಯ ಸಾವಿನ ರಹಸ್ಯ ವಾರದ ಬಳಿಕ ಬಯಲು: 18ರ ಯುವಕನ ಕಾಮಬಯಕೆಗೆ ಹೆಣವಾದ ಶರ್ಮಿಳಾ! Techie

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ಸಾಫ್ಟ್​​ ಇಂಜಿನಿಯರ್
  • ಒಂದು ವಾರದ ಬಳಿಕ ಟೆಕ್ಕಿಯ ಸಾವಿನ ರಹಸ್ಯ ಇದೀಗ ಬಯಲು
  • ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಉಸಿಗಟ್ಟಿಸಿ18 ವರ್ಷದ ಯುವಕನಿಂದ ಹತ್ಯೆ
ಬೆಂಗಳೂರು: ಒಂದು ವಾರದ ಹಿಂದಷ್ಟೇ ನಗರದ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ಸಾಫ್ಟ್​​ ಇಂಜಿನಿಯರ್ ( Techie )​ ಸಾವಿನ ರಹಸ್ಯ ಇದೀಗ ಬಯಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ 18 ವರ್ಷದ ಯುವಕ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 
ಮೃತಳನ್ನು ಶರ್ಮಿಳಾ ಡಿಕೆ (34) ಎಂದು ಗುರುತಿಸಲಾಗಿದೆ. ಈಕೆಯ ಮೃತದೇಹ ಜನವರಿ 3ರಂದು ಪತ್ತೆಯಾಯಿತು. ಅಕ್ಸೆಂಚರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಶರ್ಮಿಳಾ, ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಳು. ತನ್ನ ಫ್ಲ್ಯಾಟ್​ನಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆ, ಗಾಢವಾದ ಹೊಗೆಯಿಂದ ಉಸಿರಾಡಲಾಗದೇ ಸಾವಿಗೀಡಾಗಿದ್ದಾಳೆ ಎಂದು ಆರಂಭದಲ್ಲಿ ಅನುಮಾನಿಸಲಾಗಿತ್ತು. ಆದರೆ, ಪೊಲೀಸ್​ ತನಿಖೆಯಲ್ಲಿ ಅಸಲಿ ಸಂಗತಿ ಬಯಲಾಗಿದೆ. 
ಮೃತದೇಹ ಪತ್ತೆಯಾದ ಬಳಿಕ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್​ಎಸ್​ಎಸ್​)ಯ ಸೆಕ್ಷನ್​ 193(3) (iv) ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ವೈಜ್ಞಾನಿಕ ವಿಧಾನಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಆಧರಿಸಿ ಓರ್ವ ಆರೋಪಿಯನ್ನು ಗುರುತಿಸಿದರು. ಆತನ ಹೆಸರು ಕರ್ಣಲ್​ ಕುರಯ್​, ಈತ ಮೃತ ಶರ್ಮಿಳಾ ಅವರ ಮನೆಯ ಪಕ್ಕದಲ್ಲೇ ವಾಸವಿದ್ದ.
ಕುರಯ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಜನವರಿ 3ರಂದು ರಾತ್ರಿ 9 ಗಂಟೆ ಸುಮಾರಿಗೆ ಕಾಮದಾಸೆಯಿಂದ ಕಿಟಕಿ ಮೂಲಕ ಶರ್ಮಿಳಾಳ ಮನೆಗೆ ಕುರಯ್​ ಪ್ರವೇಶಿಸಿದ್ದಾನೆ. ಈ ವೇಳೆ ಶರ್ಮಿಳಾ ವಿರೋಧ ವ್ಯಕ್ತಪಡಿಸಿದಾಗ, ಆಕೆ ಅರೆಪ್ರಜ್ಞೆ ಹೋಗುವವರೆಗೂ ಆಕೆಯ ಬಾಯಿ ಮತ್ತು ಮೂಗನ್ನು ಕುರಯ್​ ಬಲವಂತವಾಗಿ ಮುಚ್ಚಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ ಸಂದರ್ಭದಲ್ಲಿ ಶರ್ಮಿಳಾಗೆ ತೀವ್ರ ಗಾಯಗಳಾಗಿವೆ. ಬಾಯಿ ಮತ್ತು ಮೂಗು ಮುಚ್ಚಿದ್ದರಿಂದ ಶರ್ಮಿಳಾ, ಸಾಕಷ್ಟು ಹೋರಾಟ ನಡೆಸಿ, ಕೊನೆಗೆ ಉಸಿರು ಚೆಲ್ಲಿದ್ದಾಳೆ.
ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ, ಆರೋಪಿ ಕುರಯ್​, ಶರ್ಮಿಳಾಳ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಮಲಗುವ ಕೋಣೆಯ ಹಾಸಿಗೆಯ ಮೇಲೆ ಇಟ್ಟು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ಎಸ್ಕೇಪ್​ ಆಗುವಾಗ ಆತ ಸಂತ್ರಸ್ತೆಯ ಮೊಬೈಲ್ ಫೋನ್ ಸಹ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
ತಪ್ಪೊಪ್ಪಿಗೆ ಮತ್ತು ದೃಢೀಕರಿಸುವ ಸಾಕ್ಷ್ಯಗಳು ಲಭ್ಯವಾದ ಬಳಿಕ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) (ಕೊಲೆ), 64(2), 66, ಮತ್ತು 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಪ್ರಸ್ತುತ ಪ್ರಗತಿಯಲ್ಲಿದೆ, (ಏಜೆನ್ಸೀಸ್​).