ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ್ ಶೃಂಗೇರಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ವೈಜ್ಞಾನಿಕ ಅಧಿಕಾರಿ ಕರ್ನಾಕರ್, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು 
ರಾಜ್ಯ

ಕರ್ನಾಟಕ ಆಡಳಿತದಲ್ಲಿ ತಂತ್ರಜ್ಞಾನ ಕ್ರಾಂತಿ: ‘ಕೆ.ಜಿ.ಐ.ಎಸ್. 2.0’ ಜಾರಿ : ನಿರ್ದೇಶಕ ಡಾ.ರಾಜೇಶ ಎನ್.ಎಲ್.

ಕಲಬುರಗಿ: ರಾಜ್ಯದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಲು ಸರ್ಕಾರವು ‘ ಕೆ.ಜಿ.ಐ.ಎಸ್. 2.0 ’ ಯೋಜನೆಯನ್ನು ಜಾರಿಗೆ ತಂದಿದೆ. 2025-26 ರಿಂದ 2027-28 ರವರೆಗೆ ಈ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಬೆಂಗಳೂರಿನ ನಿರ್ದೇಶಕ ಡಾ. ರಾಜೇಶ್ ಎನ್.ಎಲ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಹೊಸ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರ ಕಲಬುರಗಿ ಜಿಲ್ಲಾಡಳಿತದ ಸಹಯೋಗದಲ್ಲಿ ಕೆ-ಜಿಐಎಸ್ 2.0 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ 10 ವರ್ಷಗಳ ದೂರದೃಷ್ಟಿಯೊಂದಿಗೆ ರೂಪಿಸಲಾದ ಈ ಯೋಜನೆಯು Ai ಮಶೀನ್ ಲರ್ನಿಂಗ್ ಹಾಗೂ ಅತ್ಯಾಧುನಿಕ ಉಪಗ್ರಹ ಚಿತ್ರಣ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದರು.
ಈ ವ್ಯವಸ್ಥೆಯಿಂದ ಅಕ್ರಮ ಗಣಿಗಾರಿಕೆ ತಡೆ, ಅರಣ್ಯ ಒತ್ತುವರಿ ನಿಯಂತ್ರಣ ಮತ್ತು ಬೆಳೆ ಹಾನಿ ವಿಮೆಯಲ್ಲಿನ ಅವ್ಯವಹಾರಗಳಿಗೆ ಬ್ರೇಕ್ ಬೀಳಲಿದೆ. 30 ಸೆಂಟಿಮೀಟರ್ ಅಂತರದ ವಸ್ತುಗಳನ್ನು ಗುರುತಿಸಬಲ್ಲ ತಂತ್ರಜ್ಞಾನವು ನೈಜ ಸಮಯದ ಮಾಹಿತಿ ನೀಡಲಿದ್ದು, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆಯನ್ನು ತಳಮಟ್ಟಕ್ಕೆ ತಲುಪಿಸಲು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಕಾರ್ಯಾಗಾರ ಹಾಗೂ ತರಬೇತಿ ನೀಡಲಾಗುತ್ತಿದೆ. ದತ್ತಾಂಶ ಆಧಾರಿತ ಆಡಳಿತಕ್ಕೆ ಇದು ಹೊಸ ಶಕ್ತಿ ತುಂಬಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಅವರು ಮಾತನಾಡಿ, ನಗರ ಪಾಲಿಕೆಯ ಆಡಳಿತವನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ‘ಕೆ-ಜಿಐಎಸ್ 2.0’ ಆಪ್ ತುಂಬಾ ಅವಶ್ಯಕ ವಾಗಿದೆ. ತಂತ್ರಜ್ಞಾನದ ಸದ್ಬಳಕೆಯಿಂದ ತೆರಿಗೆ ಸೋರಿಕೆ ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ನಗರದ ಲಕ್ಷಾಂತರ ಆಸ್ತಿಗಳನ್ನು ಭೌತಿಕವಾಗಿ ಅಳೆಯುವುದು ಸವಾಲಿನ ಕೆಲಸ. ಹೀಗಾಗಿ, ಡ್ರೋನ್ ಸರ್ವೇ ಮತ್ತು 3ಡಿ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ನಿಖರ ನಕ್ಷೆ ತಯಾರಿಸಿ, ಅಕ್ರಮ ಕಟ್ಟಡ ಹಾಗೂ ಹೆಚ್ಚುವರಿ ಅಂತಸ್ತುಗಳನ್ನು ಪತ್ತೆಹಚ್ಚಲು ಅನುಕೂಲವಾಗಿಲಿದ್ದು ಇದರಿಂದ ಪಾಲಿಕೆಯ ಆದಾಯ ವೃದ್ಧಿಯಾಗಲಿದೆ ಎಂದರು.
ಜಿಲ್ಲಾ ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ ಅವರು ಮಾತನಾಡಿ, ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರಲು ಆಧುನಿಕ ತಂತ್ರಜ್ಞಾನದ ಬಳಕೆ ಅತ್ಯಗತ್ಯ. ಇಸ್ರೋ ಬೆಂಬಲಿತ ಈ ತಂತ್ರಜ್ಞಾನವನ್ನು ಬಳಸಿ ಜಿಲ್ಲೆಯನ್ನು ಅಭಿವೃದ್ಧಿಯ ‘ಹಸಿರು ವಲಯ’ಕ್ಕೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇಲಾಖಾವಾರು ಮ್ಯಾಪ್‌ಗಳು ಹಾಗೂ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು ಸೂಚಿಸಲಾಯಿತು ದತ್ತಾಂಶಗಳು ಕೇವಲ ದಾಖಲೆಯಾಗದೆ ಜನಸಾಮಾನ್ಯರ ಸೇವೆಗೆ ಬಳಕೆಯಾಗಬೇಕು ಎಂದು ಹೇಳಿದರು.
ಅಧಿಕಾರಿಗಳ ನೆರವಿಗಾಗಿ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಲು ಹಾಗೂ ಪ್ರಾಯೋಗಿಕವಾಗಿ ತಾಲೂಕು ಮಟ್ಟದಲ್ಲಿ ಪೈಲಟ್ ಯೋಜನೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗುವುದು ಎಂದರು. ಉಪವಿಭಾಗದ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅವರು ಮಾತನಾಡಿ, ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಪ್ರಸ್ತುತ ಉಪಗ್ರಹಗಳು ಭೂಮಿಯ ಮೇಲಿರುವ 50 ಸೆಂಟಿಮೀಟರ್ ಅಂತರದ ವಸ್ತುಗಳನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಹೊಂದಿವೆ. ಈ ತಂತ್ರಜ್ಞಾನವು ಕಂದಾಯ ಇಲಾಖೆಯ 'ದಿಶಾಂಕ್' ಆ್ಯಪ್ ಮೂಲಕ ಜಮೀನಿನ ಗಡಿ ಗುರುತಿಸಲು ಹಾಗೂ ನರೇಗಾ ಕಾಮಗಾರಿಗಳ ಪ್ರಗತಿಯನ್ನು ಲ್ಯಾಟ್-ಲಾಂಗ್ ಕೋಆರ್ಡಿನೇಟ್ಸ್ ಬಳಸಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ವೈಜ್ಞಾನಿಕ ಅಧಿಕಾರಿ ಲಕ್ಷಮೋಜಿ, ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ್ ಶೃಂಗೇರಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ವೈಜ್ಞಾನಿಕ ಅಧಿಕಾರಿ ಕರ್ನಾಕರ್, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು