- ಈ ಕುರಿತು ಸಿಬಿಎಸ್‌ಇಗೆ ಮನವಿ ಸಲ್ಲಿಸಿರುವ ಕಾಮ್ಸ್ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಸ್ಪಷ್ಟನೆ ನೀಡುವವರೆಗೆ ಈ ಆದೇಶದ ಅನುಷ್ಠಾನವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದೆ.
- ಕನ್ನಡವನ್ನು ಒಂದನೇ ಅಥವಾ ಎರಡನೇ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಸಿಬಿಎಸ್‌ಇಯ ಹೊಸ ಆದೇಶವು ರಾಜ್ಯದ ಈ ಕಾಯ್ದೆಯೊಂದಿಗೆ ಸಂಘರ್ಷ ಉಂಟುಮಾಡುತ್ತಿದ್ದು, ಶಾಲೆಗಳು ಯಾವ ನಿಯಮವನ್ನು ಪಾಲಿಸಬೇಕೆಂಬ ಗೊಂದಲ
- ಹೊಸ ನಿಯಮ ಹೇರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ
ಬೆಂಗಳೂರು:: ಸಿಬಿಎಸ್‌ಇ ಇತ್ತೀಚೆಗೆ ಹೊರಡಿಸಿರುವ 'ಕಡ್ಡಾಯ ಮೂರನೇ ಭಾಷೆ'ಯ ಕುರಿತಾದ ಸುತ್ತೋಲೆಯು ರಾಜ್ಯದಲ್ಲಿರುವ ಶಾಲೆಗಳಲ್ಲಿ ತೀವ್ರ ಗೊಂದಲ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು 'ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ' (ಕಾಮ್ಸ್) ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಸಿಬಿಎಸ್‌ಇಗೆ ಮನವಿ ಸಲ್ಲಿಸಿರುವ ಕಾಮ್ಸ್ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಸ್ಪಷ್ಟನೆ ನೀಡುವವರೆಗೆ ಈ ಆದೇಶದ ಅನುಷ್ಠಾನವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದೆ.
ಕರ್ನಾಟಕದಲ್ಲಿ ಈಗಾಗಲೇ 'ಕರ್ನಾಟಕ ಕನ್ನಡ ಭಾಷಾ ಕಲಿಕಾ ಕಾಯ್ದೆ 2015' ಮತ್ತು '2017ರ ನಿಯಮಾವಳಿಗಳ' ಅಡಿಯಲ್ಲಿ ಕನ್ನಡವನ್ನು ಒಂದನೇ ಅಥವಾ ಎರಡನೇ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಸಿಬಿಎಸ್‌ಇಯ ಹೊಸ ಆದೇಶವು ರಾಜ್ಯದ ಈ ಕಾಯ್ದೆಯೊಂದಿಗೆ ಸಂಘರ್ಷ ಉಂಟುಮಾಡುತ್ತಿದ್ದು, ಶಾಲೆಗಳು ಯಾವ ನಿಯಮವನ್ನು ಪಾಲಿಸಬೇಕೆಂಬ ಗೊಂದಲದಲ್ಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಈಗಾಗಲೇ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ತಾವು ಆಯ್ಕೆ ಮಾಡಿಕೊಂಡಿರುವ ಭಾಷಾ ಸಂಯೋಜನೆಗಳ ಪ್ರಕಾರ ಪ್ರವೇಶ ಪಡೆದಿದ್ದಾರೆ. ಈ ಹಂತದಲ್ಲಿ ಹೊಸ ನಿಯಮ ಹೇರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಕಾಮ್ಸ್ ನ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಸೂಕ್ತ ಪಠ್ಯಪುಸ್ತಕಗಳ ಲಭ್ಯತೆ, ಶಿಕ್ಷಕರ ನಿಯೋಜನೆ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಸ್ಪಷ್ಟತೆಯಿಲ್ಲದೆ ಈ ನಿಯಮವನ್ನು ಜಾರಿಗೆ ತರುವುದು ಅವೈಜ್ಞಾನಿಕ. ಬೇರೆ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯ ವಿಷಯದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಸಿಬಿಎಸ್‌ಇ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಸಿಬಿಎಸ್‌ಇ ಈ ಗೊಂದಲಗಳಿಗೆ 15 ದಿನಗಳ ಒಳಗಾಗಿ ಉತ್ತರಿಸಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ಈ ಸುತ್ತೋಲೆಯ ಅನುಷ್ಠಾನವನ್ನು ತಡೆಹಿಡಿಯಬೇಕು ಮತ್ತು ಶಾಲೆಗಳು ತಮ್ಮ ಪ್ರಸ್ತುತ ಭಾಷಾ ಸಂಯೋಜನೆಗಳನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.