Namma Metro Disruptions Commuters in Lorries
- ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ
- ಪೀಕ್ ಅವರ್ನಲ್ಲಿ ಕೈಕೊಟ್ಟ ಮೆಟ್ರೋ, ಕ್ಯಾಬ್, ಬಸ್ ಸಿಗದೆ ಸಾವಿರಾರು ಪ್ರಯಾಣಿಕರ ಪರದಾಟ
- ಲಾರಿ, ಗೂಡ್ಸ್ ಗಾಡಿ ಹತ್ತಿ ಮನೆಗಳಿಗೆ ತೆರಳಿದ ಪ್ರಯಾಣಿಕರು
ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾವಿರಾರು ಪ್ರಯಾಣಿಕರು ಪರದಾಡಿದರು. ಅಲ್ಲದೇ ಪೀಕ್ ಅವರ್ನಲ್ಲೇ ಮೆಟ್ರೋ ಕೈ ಕೊಟ್ಟ ಕಾರಣ ಕ್ಯಾಬ್, ಆಟೋ, ಬಸ್ ಸಿಗದೆ ಲಾರಿಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳು ಪ್ರಯಾಣಿಸಿದ ವಿಡಿಯೋಗಳು ವೈರಲ್ ಆಗಿದೆ.
ಟೆಕ್ಕಿಗಳ ಲಾರಿ ಪ್ರಯಾಣ
ಹೌದು, ಪರ್ಪಲ್ ಲೈನ್ ಮೆಟ್ರೋದಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ನೂರಕ್ಕೂ ಹೆಚ್ಚು ಪ್ರಯಾಣಿಕರು ಮನೆಗಳಿಗೆ ತೆರಳಲಾಗದೆ, ರಸ್ತೆಗಳಲ್ಲಿ ನಿಂತು ಬಸ್ ಹಾಗೂ ಆಟೋ ಕ್ಯಾಬ್ಗಾಗಿ ಕಾದರು. ಆದರೆ, ಗಂಟೆಗಟ್ಟಲೇ ಕಾದರೂ ಯಾವುದೇ ಸರ್ಕಾರಿ ವಾಹನ, ಕ್ಯಾಬ್ ಸಿಗದ ಕಾರಣ ನಿರ್ಮಾಣ ಕಾಮಗಾರಿ ಮತ್ತು ಸರಕು ಸಾಗಣೆಗೆ ಬಳಸುವ ಮುಕ್ತ ಲಾರಿಗಳ ಹಿಂಭಾಗದಲ್ಲಿ ನೂರಾರು ಐಟಿ ಉದ್ಯೋಗಿಗಳು ಒಟ್ಟಿಗೆ ನಿಂತು ಪ್ರಯಾಣಿಸುತ್ತಿದ್ದ ದೃಶ್ಯಗಳನ್ನು ಕಂಡ ನೆಟ್ಟಿಗರು ಕಿಡಿಕಾರಿದ್ದಾರೆ.
ಎಂದಿನಂತೆ ಕಾರ್ಯಾಚರಣೆ
ಇಂದು(ಜೂ.24)ರ ಬೆಳಗ್ಗೆ 5 ರಿಂದಲೇ ಮೆಟ್ರೋ ಸಂಚಾರ ಸಾಮಾನ್ಯ ವೇಳಾಪಟ್ಟಿಯಿಂದ ಸಂಚರಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. 'ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಯಶಸ್ವಿಯಾಗಿ ಸರಿಪಡಿಸಿದ್ದಾರೆ. ಇಂದು ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಸಂಪೂರ್ಣವಾಗಿ ಪುನರಾರಂಭಗೊಳ್ಳಲಿದೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಿ, ನಮ್ಮ ಮೆಟ್ರೋದ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದಕ್ಷ ಸೇವೆಗಳನ್ನು ಎಂದಿನಂತೆ ಬಳಸಿಕೊಳ್ಳುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಲಾರಿಯಲ್ಲಿ ಮನೆಗೆ ತೆರಳಿದ ಪ್ರಯಾಣಿಕರು
ಸೇವೆ ಸ್ಥಗಿತಗೊಂಡ ಹಿನ್ನೆಲೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂತು. ಮೆಜೆಸ್ಟಿಕ್ ಹಾಗೂ ಕೆಂಗೇರಿ ಭಾಗಗಳಿಗೆ ತೆರಳಬೇಕಿದ್ದವರು ಆಟೋ ಮತ್ತು ಕ್ಯಾಬ್‌ಗಳ ಮೊರೆ ಹೋಗಬೇಕಾಯಿತು. ಅವರಿಗೆ ದರ ಹೆಚ್ಚಳದ ಬಿಸಿಯೂ ತಟ್ಟಿತು. ಕೆಲವರು ಆಟೋ, ಕ್ಯಾಬ್ ಗಳೂ ಸಿಗದೆ ಪರದಾಡುವ ಪರಿಸ್ಥಿತಿ ಇತ್ತು. ಇದರಿಂದ ಅಲ್ಲೇ ಸಿಕ್ಕ ಗೂಡ್ಸ್ ಗಾಡಿ ಹಾಗೂ ಲಾರಿಗಳಲ್ಲಿ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಿರುವ ದೃಶ್ಯ ಕಂಡುಬಂದಿತು.
ಇದು ಕೇವಲ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ. ಹೈಪರ್‌ಲೂಪ್, ಕೃತಕ ಬುದ್ಧಿಮತ್ತೆ, ಫ್ಲೈಯಿಂಗ್ ಟ್ಯಾಕ್ಸಿಗಳ ಬಗ್ಗೆ ಮಾತನಾಡುವ ಭಾರತದ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ನಮ್ಮ ಮೆಟ್ರೋ ಕೈಕೊಟ್ಟಾಗ ವರ್ಕ್‌ಫೋರ್ಸ್ ಕಂಡುಕೊಂಡ ಹೊಸ ಆವಿಷ್ಕಾರವೇ 'ಟ್ರಕ್-ಆಸ್-ಎ-ಸರ್ವೀಸ್. ನಾವು ಟೆಕ್ನಾಲಜಿಯಲ್ಲಿ ಜಗತ್ತನ್ನೇ ಆಳಬಹುದು, ಆದರೆ ಬೆಂಗಳೂರು ಟ್ರಾಫಿಕ್ ಮತ್ತು ಸಾರಿಗೆ ನಮ್ಮನ್ನು ಲಾರಿ ಹತ್ತುವಂತೆ ಮಾಡುತ್ತದೆ. ಮಲ್ಟಿ-ನ್ಯಾಷನಲ್ ಕಂಪನಿಗಳ ಮ್ಯಾನೇಜರ್‌ಗಳು ಲಾರಿಯ ಹಿಂದೆ ನಿಂತು ಬ್ಯಾಲೆನ್ಸ್ ಮಾಡುತ್ತಾ ಹೋಗುತ್ತಿರುವುದು ನಮ್ಮ ಸಿಟಿಯ ನಿಜವಾದ ಪರಿಸ್ಥಿತಿ ಎಂದು ಎಕ್ಸ್ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ(ಏಜೆನ್ಸೀಸ್)