ಕಂಪ್ಲಿ ತಾಲೂಕಿನ ದೇವಲಾಪುರ ಶಾಲೆಯಲ್ಲಿ ಶಿಕ್ಷಕರು ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ಹಾಕುತ್ತಿರುವುದು.
- ಸರಿಯಾಗಿ ಕಾರ್ಯನಿರ್ವಹಿಸದ ಕರ್ತವ್ಯ ಆ್ಯಪ್
- ಶಿಕ್ಷಕರ ಪರದಾಟ
ಕಂಪ್ಲಿ: ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಭಿವೃದ್ಧಿಪಡಿಸಿರುವ ಕರ್ನಾಟಕ ಮುಂದುವರಿದ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕರ್ತವ್ಯ) ಆ್ಯಪ್ ತಾಂತ್ರಿಕ ಲೋಪಗಳಿಂದ ಕೂಡಿದೆ. ಇದರಿಂದಾಗಿ ಹಳೆಯ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಪದ್ಧತಿ ಮುಂದುವರಿಸಿದ್ದರೆ ಚೆನ್ನಾಗಿತ್ತು ಎನ್ನುವ ಶಿಕ್ಷಕರು ಅಲವೊತ್ತಿಕೊಳ್ಳುತ್ತಿದ್ದಾರೆ.
ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ತಡವಾಗಿ ಬರುವುದನ್ನು ತಡೆಯಲು ಹಾಗೂ ಶಾಲೆಗೆ ಚಕ್ಕರ್ ಹಾಕುವುದನ್ನು ನಿಯಂತ್ರಿಸಲು ಲೋಕೇಷನ್ ಮತ್ತು ಫೇಸ್(ಮುಖ)ಆಧಾರಿತ ಹಾಜರಾತಿ ವ್ಯವಸ್ಥೆ ಸುಧಾರಿತವಾಗಿದ್ದರೂ ಗ್ರಾಮೀಣ ಭಾಗದ ಶಿಕ್ಷಕರಿಗೆ ತೊಂದರೆ ತಂದಿಟ್ಟಿದೆ.
ಹಾಜರಾತಿಯನ್ನು ಶಾಲೆಯ ಆವರಣದೊಳಗೆ ಕರ್ತವ್ಯ ಆ್ಯಪ್‌ನಲ್ಲಿ ಮುಖ ತೋರಿಸಿ ಹಾಕಬೇಕಿರುವುದರಿಂದ ಸಮಯ ಪಾಲನೆ ಮತ್ತು ಕರ್ತವ್ಯದ ಜವಾಬ್ದಾರಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದರೆ, ಈ ಅ್ಯಪ್‌ನ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಬೇಕಿರುವುದರಿಂದ ಆರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾಗಿವೆ.
ಬೇರೆಡೆಯಿಂದ ವರ್ಗವಾಗಿ ಬಂದಿರುವ ಶಿಕ್ಷಕರ ಹಾಜರಾತಿಗೆ ಕರ್ತವ್ಯ ಆ್ಯಪ್ ಹಳೆ ಶಾಲೆಯ ಹೆಸರು, ಅಕ್ಷಾಂಶ, ರೇಖಾಂಶ ತೋರಿಸುತ್ತಿದ್ದು ಸದ್ಯ ಕರ್ತವ್ಯಕ್ಕೆ ಹಾಜರಾದ ಶಾಲೆ ಹೆಸರು ತೋರಿಸುತ್ತಿಲ್ಲ. ಶಾಲೆಗೆ ಸಕಾಲಕ್ಕೆ ಆಗಮಿಸಿದ್ದರೂ ಕರ್ತವ್ಯ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ್ದರಿಂದ ಶಿಕ್ಷಕರು ಭೀತಿಯಿಂದ ಹಾಜರಾತಿ ನೀಡಲು ಮುಂದಾಗುವುದರಿಂದ ಏಳೆಂಟು ಬಾರಿ ಹಾಜರಾತಿಗೆ ಪ್ರಯತ್ನಿಸಬೇಕಿದೆ. ಇದರಿಂದ ಸಮಯದೊಂದಿಗೆ ನೆಮ್ಮದಿ ಕೂಡ ಹಾಳಾಗುತ್ತಿದೆ. ಸಕಾಲಕ್ಕೆ ಶಾಲೆಗೆ ಹಾಜರಾದರೂ ತಾಂತ್ರಿಕ ಸಮಸ್ಯೆಯಿಂದ ತಡವಾಗಿ ಹಾಜರಾತಿ ಕೊಡುವಂತಾಗಿದೆ.
ಆಫ್‌ಲೈನ್ ಕೂಡ ಅಸಮರ್ಪಕ
ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕರ್ತವ್ಯ ಆ್ಯಪ್ ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರೊಂದಿಗೆ ಮುಖದ ಮಿಸ್ ಮ್ಯಾಚ್ ಸಮಸ್ಯೆಯೂ ಕಾಡುತ್ತಿದೆ. ಹಾಜರಾತಿ ಹಾಕುವ ಸರ್ಕಸ್‌ನಲ್ಲಿಯೇ ನೆಮ್ಮದಿ ಕಳೆದುಕೊಳ್ಳುತ್ತಿರುವ ಶಿಕ್ಷಕರಿಗೆ ಆ ಬಳಿಕ ವಿದ್ಯಾರ್ಥಿಗಳಿಗೆ ಬೋಧಿಸುವ ಸವಾಲು ಇದೆ. ಉಪ್ಪಾರಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಕರ್ತವ್ಯ ಆ್ಯಪ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕರ್ತವ್ಯದಲ್ಲಿ ಆಫ್‌ಲೈನ್ ಮೂಲಕವೂ ಹಾಜರಾತಿ ನೀಡುವ ಅವಕಾಶ ಇದ್ದರೂ ಅದು ಕೂಡಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಕರ್ತವ್ಯ ಆ್ಯಪ್ ತಾಂತ್ರಿಕ ಕಾರಣದಿಂದ ಸರಿಯಾಗಿ ಕಾಯ್‌ನಿರ್ವಹಿಸದಿದ್ದಲ್ಲಿ ಶಿಕ್ಷಕರು ಹೆದರುವ ಅಗತ್ಯವಿಲ್ಲ. ಶಾಲೆಗೆ ಸಕಾಲಕ್ಕೆ ಆಗಮಿಸಿ ಬೆಳಗಿನ ಜಿಪಿಎಸ್ ಫೋಟೋ ನಂತರ ಶಾಲಾ ಮುಕ್ತಾಯದ ಜಿಪಿಎಸ್ ಪೋಟೋ ಕಾಯ್ದಿರಿಸುವಂತೆ, ಒಒಡಿ ಮೂಲಕ ಹಾಜರಾತಿ ಹಾಕಲು ಸೂಚಿಸಿದೆ. ಕರ್ತವ್ಯ ಆ್ಯಪ್ ತಾಂತ್ರಿಕ ತೊಂದರೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
— ಭೂಮೇಶ್ವರ ಎ.ಎಸ್., ಸಿಆರ್‌ಪಿ, ಮೆಟ್ರಿ-ಸುಗ್ಗೇನಹಳ್ಳಿ
ವರ್ಗವಣೆ ಆದವರಿಗೆ, ಬಡ್ತಿ ಹೊಂದಿದ ಶಿಕ್ಷಕರಿಗೆ, ನಿಯೋಜನೆ ಹೊಂದಿದ ಶಿಕ್ಷಕರಿಗೆ ಕರ್ತವ್ಯ ಆ್ಯಪ್ ಸರಿಯಾಗಿ ನಿರ್ವಹಿಸುತ್ತಿಲ್ಲ. ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ಪದ್ಧತಿ ಇರಲಿ. ಆದರೆ, ಸಮರ್ಪಕ ನಿರ್ವಹಣೆಗೆ ಸುಧಾರಿತ ನೆಟ್‌ವರ್ಕ್, ಸರ್ವರ್ ವ್ಯವಸ್ಥೆ ಕಲ್ಪಿಸಬೇಕು.
— ಹನುಮಂತಪ್ಪ, ತಾಲೂಕು ಅಧ್ಯಕ್ಷ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ, ಕಂಪ್ಲಿ