ಟೀಮ್ ಏಕತಾ ಟ್ರಸ್ಟ್ ( Team Ekatha )
- ಸಮಾನಮನಸ್ಕರೆಲ್ಲ ಒಂದಾದರೆ ಸಂಕಷ್ಟದಲ್ಲಿ ಇರುವವರಿಗೆ ಪ್ರಯೋಜನ ಆಗಬಹುದು ಎಂಬುದಕ್ಕೆ ಟೀಮ್ ಏಕತಾ ಟ್ರಸ್ಟ್ ಉದಾಹರಣೆ
- ಆರ್ಥಿಕ ಸಂಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯ ಮಾಡಬೇಕು ಎಂದು 2019ರಲ್ಲಿ ರೂಪುಗೊಂಡ ವಾಟ್ಸ್‌ಆ್ಯಪ್ ಗ್ರೂಪ್
- ಬಳಿಕ 'ಟ್ರಸ್ಟ್' ಸ್ವರೂಪ ಪಡೆದು ಪ್ರತಿ ತಿಂಗಳೂ ಕನಿಷ್ಠ ಐವರಿಗೆ ತಲಾ 30 ಸಾವಿರ ರೂ. ವರೆಗೆ ಸಹಾಯ
ಬೆಂಗಳೂರು: ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಮಾನಮನಸ್ಕರೆಲ್ಲ ಒಂದಾಗಿ, ಸಮಯಕ್ಕೆ ಸರಿಯಾಗಿ ಸ್ಪಂದಿಸಿದರೆ ಸಂಕಷ್ಟದಲ್ಲಿ ಇರುವವರಿಗೆ ಪ್ರಯೋಜನ ಆಗಬಹುದು ಎಂಬುದಕ್ಕೆ 'ಟೀಮ್ ಏಕತಾ ಟ್ರಸ್ಟ್' ( Team Ekatha ) ಉತ್ತಮ ಉದಾಹರಣೆಯಾಗಿದೆ.
ಸಮುದಾಯದಲ್ಲಿ ಅನಾರೋಗ್ಯದಲ್ಲಿದ್ದು, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯ ಮಾಡಬೇಕು ಎಂದು 2019ರಲ್ಲಿ ರೂಪುಗೊಂಡ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವಯಸ್ಸು-ಲಿಂಗ ಭೇದವಿಲ್ಲದೆ ಒಂದಾದ ಸಮಾನಮನಸ್ಕರ ಈ ಸಮೂಹ, ಬಳಿಕ 'ಟ್ರಸ್ಟ್' ಸ್ವರೂಪ ಪಡೆದು ಪ್ರತಿ ತಿಂಗಳೂ ಕನಿಷ್ಠ ಐವರಿಗೆ ತಲಾ 30 ಸಾವಿರ ರೂ. ವರೆಗೆ ಸಹಾಯ ಮಾಡುವ ಹಂತಕ್ಕೆ ತಲುಪಿದೆ.
ತಂಡದ ಪ್ರತಿಯೊಬ್ಬರೂ ಪ್ರತಿ ತಿಂಗಳು ನೀಡುವ 200 ರೂಪಾಯಿಯೇ ಈ ಟೀಮ್ ಏಕತಾದ ಜೀವಾಳ. ಅನಾರೋಗ್ಯಕ್ಕೀಡಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ 202 ಮಂದಿಗೆ ಈವರೆಗೆ ಒಟ್ಟಾರೆ 49.87 ಲಕ್ಷ ರೂ.ಗಳನ್ನು ಈ ಟೀಮ್ ನೀಡಿದೆ. ಪ್ರಮುಖವಾಗಿ ಬೆಂಗಳೂರು, ಕುಂದಾಪುರ, ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಭಾಗದಲ್ಲಿ ಸದಸ್ಯರನ್ನು ಹೊಂದಿರುವ ಟೀಮ್ ಏಕತಾಗೆ ಮುಂಬೈ, ಚೆನ್ನೈ ಮಾತ್ರವಲ್ಲದೆ ವಿದೇಶದಲ್ಲೂ ಸದಸ್ಯರಿದ್ದಾರೆ. ಪ್ರತಿ ತಿಂಗಳ ಫಲಾನುಭವಿಗಳಿಗೆ ಗ್ರೂಪ್ ಸದಸ್ಯರೇ ಖುದ್ದಾಗಿ ತೆರಳಿ ಚೆಕ್ ಹಸ್ತಾಂತರಿಸಿ ಶೀಘ್ರ ಗುಣಮುಖರಾಗಿ ಎಂದು ಟೀಮ್ ಏಕತಾದ ವೈಶಿಷ್ಟ್ಯಗಳಲ್ಲೊಂದು.
ಸದ್ಯ ಅನಾರೋಗ್ಯದಲ್ಲಿದ್ದು ಆರ್ಥಿಕ ಸಂಕಷ್ಟದಲ್ಲಿ ಇರುವವರಿಗಷ್ಟೇ ನೆರವಾಗುತ್ತಿರುವ ಟೀಮ್ ಏಕತಾ, ಮುಂದೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆಯೂ ಸಹಾಯ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
50ರ ಸಂಭ್ರಮ-ಸಮಾಗಮ ಏ. 25ರಂದು
ಟೀಮ್ ಏಕತಾದಲ್ಲಿ ಈಗ ಸುಮಾರು 700 ಮಂದಿ ಇದ್ದು, ಮಾರ್ಚ್ ತಿಂಗಳ ಧನಸಹಾಯದೊಂದಿಗೆ ಇವರು ಈ ವರೆಗೆ ನೀಡಿರುವ ಮೊತ್ತ 50 ಲಕ್ಷ ರೂ. ದಾಟಲಿದೆ. ಇಂಥದ್ದೊಂದು ಮೈಲಿಗಲ್ಲು ತಲುಪಲು ನಿರಂತರವಾಗಿ ಕೈಜೋಡಿಸಿದ ಟೀಮ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಲು ಏಪ್ರಿಲ್ 25ರ ಶನಿವಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಟೀಮ್ ಏಕತಾ ಸದಸ್ಯರ ಸಮಾಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಹಿಂದೆ ಒಟ್ಟು ನೆರವಿನ ಮೊತ್ತ 25 ಲಕ್ಷ ರೂ. ದಾಟಿದ್ದಾಗ ಬೆಂಗಳೂರಿನಲ್ಲಿ ಇಂಥದ್ದೊಂದು ಸಮ್ಮಿಲನ ಏರ್ಪಡಿಸಲಾಗಿತ್ತು.
ಸಮಾನಮನಸ್ಕ ಪತ್ರಕರ್ತರಲ್ಲೂ ಆರಂಭ
ಸಮಾನಮನಸ್ಕ ಪತ್ರಕರ್ತರು 'ಟೀಮ್ ಏಕತಾ'ದಿಂದ ಪ್ರೇರಣೆಗೊಂಡು ಆ ಮಾದರಿಯಲ್ಲೇ 'ಆಪದ್ಭಾಂಧವ' ಎಂಬ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಅನಾರೋಗ್ಯದಲ್ಲಿದ್ದು ಹಣಕಾಸು ಸಮಸ್ಯೆ ಎದುರಿಸುತ್ತಿರುವ ಪತ್ರಕರ್ತರಿಗೆ ನೆರವಾಗುತ್ತಿದ್ದಾರೆ. ಆಪದ್ಬಾಂಧವ ಕೂಡ ಮಾರ್ಚ್‌ನಲ್ಲಿ ನೂರು ಫಲಾನುಭವಿಗಳ ಮೈಲಿಗಲ್ಲು ದಾಟಲಿದ್ದು, ಅದರ ಒಟ್ಟು ಸಹಾಯದ ಮೊತ್ತ 25 ಲಕ್ಷ ರೂ. ಮೀರಲಿದೆ. ಇದೇ ಮಾದರಿಯ ಸ್ವಸಹಾಯ ಗುಂಪನ್ನು ಇತರ ಸಮುದಾಯ-ಕ್ಷೇತ್ರ ಗಳಲ್ಲೂ ಆರಂಭಿಸಬಹುದು ಎಂಬುದು ಟೀಮ್ ಏಕತಾ ಟ್ರಸ್ಟಿಯೊಬ್ಬರ ಅಭಿಮತ.