ಬಸವನಬಾಗೇವಾಡಿ ತಾಲೂಕಿನ ಡೋಣೂರು ಕಟ್ಟಿಮನಿ ಹಿರೇಮಠದಲ್ಲಿ ಶ್ರೀ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಇತರೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ಡಾ. ಸಿದ್ಧಲಿಂಗ ಶಿವಾಚಾರ್ಯರು, ಡಾ.ಮಲಯಶಾಂತಮುನಿ ಶಿವಾಚಾರ್ಯರು, ಡಾ.ಶಿವಕುಮಾರ ಶಿವಾಚಾರ್ಯರು ಮತ್ತಿತರರಿದ್ದರು.
- ಸಚಿವ ಶಿವಾನಂದ ಪಾಟೀಲ ಅಭಿಮತ
- ಡೋಣೂರು ಕಟ್ಟೀಮನಿ ಹಿರೇಮಠದಲ್ಲಿ ಜಾತ್ರಾ ಮಹೋತ್ಸವ
ಬಸವನಬಾಗೇವಾಡಿ: ಸರ್ವ ಧರ್ಮಗಳನ್ನು ಸಮಾನತೆಯಿಂದ ಕಾಣುವ ಧರ್ಮ ವೀರಶೈವ ಲಿಂಗಾಯತವೆಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಡೋಣೂರು ಕಟ್ಟೀಮನಿ ಹಿರೇಮಠದಲ್ಲಿ ಶ್ರೀ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ಹಜರತ್ ಸುಲೈಮಾನ್ ಉರುಸು ಮತ್ತು ಚೌಡಮ್ಮದೇವಿ ಜಾತ್ರೆ, ಶ್ರೀ ಬಂಥನಾಳ ಶಿವಯೋಗಿಗಳ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ, ಅಭಿನಂದನಾ ಗೌರವ, ಹಾಗೂ ಅಗ್ನಿ ಶಮನ, ಭಾವೈಕ್ಯ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಮಕೂರು ಸಿದ್ಧಗಂಗಾಮಠದಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಓದುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಜಾತಿ, ಧರ್ಮ, ಭೇದ-ಭಾವವನ್ನು ಹೋಗಲಾಡಿಸಿ ಅವರ ಮನಸ್ಸಿನಲ್ಲಿ ಮಾನವೀಯ ಮೌಲ್ಯದ ತತ್ವ ಬೋಧನೆ ಮಾಡುವ ಕಾರ್ಯವನ್ನು ವೀರಶೈವ ಲಿಂಗಾಯತ ಮಠಮಾನ್ಯಗಳು ಮಾಡುತ್ತಿವೆ ಎಂದರು.
2027ರಲ್ಲಿ ಜಿಲ್ಲೆಯ ಇಂಡಿ, ಸಿಂದಗಿ, ಬಸವನಬಾಗೇವಾಡಿ ತಾಲೂಕಿನ ಬಹುತೇಕ ಹಳ್ಳಿಗಳಿಗೆ 1300 ಕೋಟಿ ರೂ. ವೆಚ್ಚದಲ್ಲಿ 24/7 ಕುಡಿಯುವ ನೀರು ಪೂರೈಕೆಯಾಗಲಿದೆ. ಒಂದು ಕಾಲದಲ್ಲಿ ಕ್ಷೇತ್ರದ ಡೋಣಿ ನದಿ ದಂಡೆಯಲ್ಲಿರುವ ಡೋಣೂರು ಗ್ರಾಮಕ್ಕೆ ಸಂಪರ್ಕಿಸುವ ಬಹು ವರ್ಷದ ಡೋಣಿ ನದಿ ಬ್ರಿಜ್ ನಿರ್ಮಾಣಕ್ಕೆ ಸರ್ಕಾರ 35ಕೋಟಿ ರೂ. ಮಂಜೂರು ಮಾಡಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದೆಂದು ಹೇಳಿದರು.
ಶಿರಶ್ಯಾಡ ಮುರುೇಂದ್ರ ಶಿವಾಚಾರ್ಯರು ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವರು ಭಾಗ್ಯವಂತರು. ಸಮಾಜದಲ್ಲಿ ಅನೇಕ ಶ್ರೀಮಂತರು ಲಕ್ಷಾಂತರ ಹಣ ಖರ್ಚು ಮಾಡಿ ಆಡಂಬರದ ಮದುವೆ ಮಾಡುತ್ತಾರೆ. ಅಂತವರಿಗೆ ಶ್ರೀಗಳ ಆಶೀರ್ವಾದ ಸಿಗುವುದಿಲ್ಲ. ನೀವು ಪುಣ್ಯವಂತರು ನಿಮಗೆ ಹತ್ತಾರು ಶ್ರೀಗಳು ಆಶೀರ್ವಾದ ಸಿಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರ್ಥಿಕ ಸ್ಥಿತಿ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಹಾಗಾಗಿ ನೀವು ಕೂಡ ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ ಎಂದರು.
ಜಾಲಹಳ್ಳಿ ಮಠದ ಡಾ.ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಅತ್ತೆಯನ್ನು ಸೊಸೆ ತಾಯಿಯಂತೆ, ಅತ್ತೆ ಸೊಸೆಯನ್ನು ಮಗಳಂತೆ ಕಂಡಾಗ ಬದುಕಿನಲ್ಲಿ ಸ್ವರ್ಗ ಸುಖ ಸಿಗುತ್ತದೆ ಎಂದು ಹೇಳಿದರು.
ಡಾ.ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಸರಳ ಸಜ್ಜನಿಕೆಯ ಬದುಕು ಕಟ್ಟಿಕೊಳ್ಳಬೇಕು. ದಾನ, ಧರ್ಮ ಮಾಡುವ ವ್ಯಕ್ತಿಯ ಬಳಿ ನಾನು ಎಂಬ ಅಹಂ ಭಾವನೆ ಇರಬಾರದು ಎಂದು ತಿಳಿಸಿದರು.
ಬಂಥನಾಳ ವೃಷಭಲಿಂಗ ಶಿವಯೋಗಿಗಳು ಮಾತನಾಡಿ, ಇಂದು ನಮ್ಮ ಸನಾತನ ಧರ್ಮವು ಅಳಿವಿನ ಅಂಚಿನಲ್ಲಿದೆ. ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಹೇಳಿದರು.
ಡೋಣೂರು ಕಟ್ಟಿಮನಿ ಹಿರೇಮಠದ ಡಾ. ಸಿದ್ಧಲಿಂಗ ಶಿವಾಚಾರ್ಯರು, ಶಿವಗಂಗೆ ಡಾ.ಮಲಯಶಾಂತಮುನಿ ಶಿವಾಚಾರ್ಯರು, ಕವಲಗಿ ಅಭಿನವ ಸಿದ್ಧರಾಮೇಶ್ವರ ಶ್ರೀ, ಕೆರೂರ ಡಾ.ಶಿವಕುಮಾರ ಶಿವಾಚಾರ್ಯರು ಮಾತನಾಡಿದರು.
ಚಿಮ್ಮಲಗಿ ಸಿದ್ಧರೇಣುಕ ಶಿವಾಚಾರ್ಯರು, ಇಂಗಳೇಶ್ವರದ ಬಂಗೀಶ್ವರಲಿಂಗ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಡಾ. ನೀಲಕಂಠ ಶಿವಾಚಾರ್ಯರು, ರಾಚೋಟೇಶ್ವರ ಶಿವಾಚಾರ್ಯರು, ಪ್ರಶಾಂತ ಸಾಗರ ಶಿವಾಚಾರ್ಯರು, ಕೈಲಾಸಲಿಂಗ ಶಿವಾಚಾರ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗ ಅಂಗಡಿ. ನಿವೃತ್ತ ನ್ಯಾಯಾಧೀಶ ಎಂ.ಟಿ. ಆನಂದಶೆಟ್ಟಿ ಮತ್ತಿತರರಿದ್ದರು.